ಲಕ್ಮೇಶ್ವರ : ಟ್ಯೂಷನ್‌ಗೆ ತೆರಳಿದ್ದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬೆಚ್ಚಿಬೀಳಿಸುವ ಘಟನೆ ತಾಲೂಕಿನ ಗ್ರಾಮವೊಂದರಲ್ಲಿ ಶನಿವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅದೇ ಗ್ರಾಮದ ನಿವಾಸಿಗಳಾದ ಅಲ್ಲಾಭಕ್ಷ ಕೊಪ್ಪದ ಮತ್ತು ಆಸಿಫ್ ನಡಾಫ್ ಎಂದು ಗುರುತಿಸಲಾಗಿದೆ. ಟ್ಯೂಷನ್‌ಗೆ ತೆರಳುತ್ತಿದ್ದ ಬಾಲಕಿಯನ್ನು ಮಧ್ಯೆ ತಡೆದ ಆರೋಪಿಗಳು, “ನಿಮ್ಮ ಅಣ್ಣ ಕರೆಯುತ್ತಿದ್ದಾನೆ” ಎಂದು ನಂಬಿಸಿ ವಾಹನದಲ್ಲಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ. ಘಟನೆ ಕುರಿತು ಬಾಲಕಿಯ ತಾಯಿ ಲಕ್ಮೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದಲ್ಲಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯ ಕೇಳಿಬಂದಿದೆ.

