ಕಸಾಯಿಖಾನೆಗೆ ಅಕ್ರಮವಾಗಿ ದನ-ಕರು ಸಾಗಾಟ, ಇಬ್ಬರ ಬಂಧನ

0
6

ಹಿರಿಯಡಕ : ಕಾರ್ಕಳ ತಾಲೂಕಿನ ಕುಕ್ಕುಜೆ ಬಳಿ ಮೇಯುತ್ತಿದ್ದ ಜಾನುವಾರುಗಳನ್ನು ಕಳವು ಮಾಡಿ, ಕಸಾಯಿಖಾನೆಗೆ ಕ್ರೂರವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹಿರಿಯಡಕ ಠಾಣೆ ಪೊಲೀಸರು ಚೇಸ್ ಮಾಡಿ ಅಂಜಾರ್ ಜಂಕ್ಷನ್ ಬಳಿ ಬಂಧಿಸಿದ್ದಾರೆ. ಬಂಧಿತರಿಂದ 3 ಲಕ್ಷ ರೂ. ಮೌಲ್ಯದ ಪಿಕಪ್ ಗೂಡ್ಸ್ ವಾಹನ ಹಾಗೂ 4 ಜಾನುವಾರುಗಳನ್ನು ರಕ್ಷಿಸಲಾಗಿದೆ.

ಬಂಧಿತ ಆರೋಪಿಗಳನ್ನು ಕಾಪು ತಾಲೂಕು ಕುರ್ಕಾಲು ಗ್ರಾಮದ ಸುಭಾಷ್ ನಗರ ನಿವಾಸಿ ಅಬ್ದುಲ್ ಸತ್ತರ್ (54) ಹಾಗೂ ಇನ್ನಂಜೆ ಗ್ರಾಮದ ಮಾಳದಬೆಟ್ಟು ನಿವಾಸಿ ಯೋಗೀಶ್ ನಾಯ್ಕ್ (49) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 09ರಂದು ಹರಿಖಂಡಿಗೆ ಕಡೆಯಿಂದ ಹಿರಿಯಡಕದತ್ತ ಗೂಡ್ಸ್ ಟೆಂಪೋದಲ್ಲಿ ಅಕ್ರಮವಾಗಿ ದನ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿರಿಯಡಕ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗಕ್ಕೆ ಸಿಕ್ಕಿತ್ತು.

ತಕ್ಷಣವೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಬೊಮ್ಮಾರಬೆಟ್ಟು ಗ್ರಾಮದ ಕೊಟ್ನಕಟ್ಟೆ ಬಳಿ ವಾಹನವನ್ನು ತಡೆದು ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ ಚಾಲಕ ವಾಹನವನ್ನು ನಿಲ್ಲಿಸದೆ ವೇಗವಾಗಿ ಮುನ್ನುಗ್ಗಿದ್ದಾನೆ. ಕೂಡಲೇ ಪೊಲೀಸರು ಠಾಣೆಗೆ ಮಾಹಿತಿ ರವಾನಿಸಿ, ಠಾಣೆಯ ಎದುರು ವಾಹನ ತಡೆಯುವಂತೆ ಸೂಚಿಸಿದ್ದಾರೆ. ಹಿರಿಯಡ್ಕ ಠಾಣೆ ಎದುರಿನ ಜಂಕ್ಷನ್ ಬಳಿ ಸಮಯಪ್ರಜ್ಞೆ ಮೆರೆದು ಟೆಂಪೋವನ್ನು ಯಶಸ್ವಿಯಾಗಿ ತಡೆದು ನಿಲ್ಲಿಸಿದ್ದಾರೆ.

ವಾಹನವನ್ನು ಪರಿಶೀಲಿಸಿದಾಗ ಅದರೊಳಗೆ 4 ಜಾನುವಾರುಗಳಿರುವುದು ಕಂಡುಬಂದಿದೆ. ಜಾನುವಾರುಗಳಿಗೆ ತೀವ್ರ ಹಿಂಸೆಯಾಗುವ ರೀತಿಯಲ್ಲಿ ಅವುಗಳ ಕುತ್ತಿಗೆ ಮತ್ತು ಕಾಲುಗಳಿಗೆ ನೈಲಾನ್ ಹಗ್ಗದಿಂದ ಬಿಗಿದು, ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಕಸಾಯಿಖಾನೆಗೆ ವಧೆ ಮಾಡುವ ಉದ್ದೇಶದಿಂದ ಕರೆದೊಯ್ಯಲಾಗುತ್ತಿತ್ತು. ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದ ಪಲಬೆಟ್ಟು ನಿವಾಸಿ ಕೃಷ್ಣ ಪೂಜಾರಿ ಎಂಬವರ ಮನೆಯ ಹತ್ತಿರ ಮೇಯುತ್ತಿದ್ದ ಜಾನುವಾರುಗಳನ್ನು ಕಳವು ಮಾಡಿ ತಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ವಶಪಡಿಸಿಕೊಂಡ ಜಾನುವಾರುಗಳ ಮೌಲ್ಯ ಸುಮಾರು 20,000 ರೂ. ಹಾಗೂ ಗೂಡ್ಸ್ ವಾಹನದ ಮೌಲ್ಯ ಸುಮಾರು 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಕುರಿತು ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.