ಫೋಟೋ ವೈರಲ್ ಮಾಡುವ ಬೆದರಿಕೆ, ಲೈಂಗಿಕ ದೌರ್ಜನ್ಯ ಆರೋಪ : ತೀರ್ಥಹಳ್ಳಿಯಲ್ಲಿ ಇಬ್ಬರ ಬಂಧನ

0
6

ತೀರ್ಥಹಳ್ಳಿ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ವ್ಯಾಪ್ತಿಯಲ್ಲಿ ದ್ವಿತೀಯ ಬಿಕಾಂ ವ್ಯಾಸಂಗ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ, ಬೆದರಿಕೆ ಹಾಗೂ ಕಿರುಕುಳ ನೀಡಿದ ಆರೋಪದಡಿ ಇಬ್ಬರನ್ನು ಪೊಲೀಸರು ಬಂಧಿಸಿ ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಜುಲೈ 9ರಂದು ಯುವತಿ ಕೋಣಂದೂರು ಪೊಲೀಸ್ ಉಪಠಾಣೆಗೆ ಲಿಖಿತ ದೂರು ಸಲ್ಲಿಸಿದ್ದು, ಸುಮಾರು ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ತನ್ನೊಂದಿಗೆ ಸ್ನೇಹ ಬೆಳೆಸಿ, ನಂತರ ತನ್ನ ಫೋಟೋಗಳನ್ನು ಅಸಭ್ಯವಾಗಿ ಎಡಿಟ್ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೆ, ನಂತರದ ದಿನಗಳಲ್ಲಿ ಹಲವು ಬಾರಿ ಬೆದರಿಕೆ ಹಾಕಿ ದೌರ್ಜನ್ಯ ಮುಂದುವರಿಸಿದ್ದಾನೆ ಎಂದು ಯುವತಿ ತಿಳಿಸಿದ್ದಾರೆ.

ದೂರಿನಲ್ಲಿ ಮತ್ತೊಬ್ಬ ಆರೋಪಿಯು ಈ ವಿಚಾರವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು, ಇನ್ನೋರ್ವ ವ್ಯಕ್ತಿಯು ಮೊಬೈಲ್ ಸಂದೇಶಗಳ ಮೂಲಕ ಅವಾಚ್ಯವಾಗಿ ಕಿರುಕುಳ ನೀಡುವುದರ ಜೊತೆಗೆ ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಹಿಂಬಾಲಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಯುವತಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ತೀರ್ಥಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

LEAVE A REPLY

Please enter your comment!
Please enter your name here