ವಿನಮ್ರ ಬಾರ್‌ಗೆ ನುಗ್ಗಿ ತಲವಾರು ಬೀಸಿ ಬೆದರಿಕೆ : ಇಬ್ಬರು ಪೊಲೀಸರ ವಶಕ್ಕೆ

0
101

ಮಂಗಳೂರು : ತೊಕ್ಕೊಟ್ಟಿನ ವಿನಮ್ರ ಬಾರ್‌ಗೆ ತಲವಾರು ಬೀಸಿ, ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬಾರ್ ಬಂದ್ ಮಾಡುವಂತೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ರೌಡಿಶೀಟರ್ ಸೇರಿದಂತೆ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಳ್ಳಾಲದ ಮಾರ್ಗತಲೆ ನಿವಾಸಿ ಮೊಹಮ್ಮದ್ ಶಾಕಿರ್ (31) ಮತ್ತು ಉಳ್ಳಾಲದ ಮಂಚಿಲ ನಿವಾಸಿ ಅಶ್ಫಾಕ್ (28) ಎಂದು ಗುರುತಿಸಲಾಗಿದೆ. ಶಾಕಿರ್ ರೌಡಿಶೀಟರ್ ಆಗಿದ್ದು, ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಮತ್ತೋರ್ವ ಆರೋಪಿ ಅಶ್ಫಾಕ್ ಆಟೋರಿಕ್ಷಾ ಚಾಲಕನಾಗಿದ್ದಾನೆ.

ಭಾನುವಾರ ರಾತ್ರಿ ಸುಮಾರು 12ರಿಂದ 12.20ರ ನಡುವೆ ಘಟನೆ ನಡೆದಿದೆ. ಅಶ್ಫಾಕ್ ಆಟೋರಿಕ್ಷಾದಲ್ಲಿ ಶಾಕಿರ್‌ನನ್ನು ಕರೆತಂದಿದ್ದು, ಬಾರ್‌ಗೆ ಪ್ರವೇಶಿಸಿದ ಶಾಕಿರ್ ತಲವಾರು ಬೀಸಿ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬಾರ್ ಬಂದ್ ಮಾಡುವಂತೆ ಒತ್ತಾಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಲವಾರು ಹಿಡಿದು ದಾಂಧಲೆ ನಡೆಸುತ್ತಿದ್ದ ವೇಳೆ ಬಾರ್‌ನಲ್ಲಿದ್ದ ಗ್ರಾಹಕರು ಭಯಭೀತರಾಗಿ ಅಲ್ಲಿಂದ ಓಡಿಹೋದರು ಎನ್ನಲಾಗಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಬಾರ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಘಟನೆ ಕುರಿತು ಮಾಹಿತಿ ಲಭಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಕಾನೂನಿನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತ ಶಾಕಿರ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೂ ಹಲವು ಅಪರಾಧ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.