ಮಂಗಳೂರು:(ಜೂ.18) ರಸ್ತೆ ವಿಭಜಕಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಜಪ್ಪಿನಮೊಗರು ಬಳಿ ನಡೆದಿದೆ.
ಮೃತರನ್ನು ಕೊಂಚಾಡಿಯ ಓಂಶ್ರೀ (24) ಮತ್ತು ಮಲ್ಲಿಕಟ್ಟೆಯ ಅಮನ್ ರಾವ್ (23) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ನಾಲೈದು ಮಂದಿ ಪ್ರಯಾಣಿಸುತ್ತಿದ್ದು ಕಾರನ್ನು ಅಮನ್ ರಾವ್ ಚಲಾಯಿಸುತ್ತಿದ್ದರು ಎನ್ನಲಾಗಿದೆ.
ತಲಪಾಡಿ ಕಡೆಯಿಂದ ಪಂಪ್ ವೆಲ್ ಕಡೆಗೆ ಬರುತ್ತಿದ್ದ ಕಾರು ಜಪ್ಪಿನಮೊಗರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಢಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಇಟಲಿಯ ಪ್ರಜೆ ಸಹಿತ ಮೂವರಿಗೆ ಗಾಯಗಳಾಗಿದ್ದು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.