
ಉಡುಪಿ: ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಜಿ.ಎಸ್.ಬಿ. ಯುವಕ ಮಂಡಳಿಯ 56ನೇ ವಾರ್ಷಿಕೋತ್ಸವವು ಇತ್ತೀಚೆಗೆ ದೇವಳದ ಕಮಲನಾಥ ಮಂಟಪದಲ್ಲಿ ನಡೆಯಿತು.
ದೇವಳದ ವಾರ್ಷಿಕ ಉತ್ಸವಗಳು ಹಾಗೂ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹಲವು ವರ್ಷಗಳ ಕಾಲ ಪಾಕತಜ್ಞರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿರುವ ಮರ್ಣೆ ವೆಂಕಟೇಶ್ ಕಾಮತ್ ದಂಪತಿಯನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ದಂಪತಿಗೆ ಶಾಲು ಹೊದಿಸಿ, ಫಲಪುಷ್ಪ ಹಾಗೂ ಶ್ರೀದೇವರ ಪ್ರಸಾದ ನೀಡಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ದೇವಳದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತ್ರಿಷಾ ಸಂಸ್ಥೆಯ ಸಿಎ ಗೋಪಾಲಕೃಷ್ಣ ಭಟ್ ಅವರು ನವರಾತ್ರಿ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿ.ಎಸ್.ಬಿ. ಯುವಕ ಮಂಡಳಿಯ ಅಧ್ಯಕ್ಷ ನಿತೇಶ್ ಶೆಣೈ, ಮಾಜಿ ಅಧ್ಯಕ್ಷ ಸುಬ್ರಮಣ್ಯ ಪೈ, ವಿಜಿತಾ ಬಿ. ಶೆಣೈ ಹಾಗೂ ಯುವಕ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
