ಉಡುಪಿ : ಶೈಕ್ಷಣಿಕ ಸಾಧನೆಯಲ್ಲಿ ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಪರಿಶ್ರಮದ ಕೊಡುಗೆ ಅಪಾರ – ಯಶ್ ಪಾಲ್ ಸುವರ್ಣ

0
76

ಉಡುಪಿ ಜಿಲ್ಲೆ ಎಸ್. ಎಸ್. ಎಲ್. ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ನಿರಂತರವಾಗಿ ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳನ್ನು ಪಡೆದು ಉಡುಪಿ ಜಿಲ್ಲೆಯ ಶೈಕ್ಷಣಿಕ ಸಾಧನೆಯ ಮೂಲಕ ಜಿಲ್ಲೆಗೆ ಕೀರ್ತಿ ತರುವಲ್ಲಿ ಜಿಲ್ಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಕಠಿಣ ಪರಿಶ್ರಮದ ಕೊಡುಗೆ ಅಪಾರ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.

ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ಹಾಗೂ ಶಾಲಾಭಿವೃದ್ಧಿ ಸಮಿತಿ ಪ್ರತಿನಿಧಿಗಳಿಗೆ ಎಸ್. ಎಸ್. ಎಲ್. ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ವ ಸಿದ್ಧತಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಸಕನಾದ ಬಳಿಕ ಕಳೆದ 3 ವರ್ಷಗಳಿಂದ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್. ಎಸ್. ಎಲ್. ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಪೂರ್ವ ಸಿದ್ಧತಾ ಕಾರ್ಯಾಗಾರವನ್ನು ಆಯೋಜಿಸಿಕೊಂಡು ಬರುತ್ತಿದ್ದು ಉತ್ತಮ ಫಲಿತಾಂಶಕ್ಕೆ ಸಹಕಾರಿಯಾಗುತ್ತಿರುವುದು ಸಂತಸ ತಂದಿದೆ ಎಂದರು.

ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಅಶೋಕ್ ಕಾಮತ್ ಮಾತನಾಡಿ ಎಸ್. ಎಸ್.ಎಲ್. ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಸುಮಾರು 40 ದಿನಗಳು ಬಾಕಿ ಇದ್ದು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಬರೆಯುವ ನಿಟ್ಟಿನಲ್ಲಿ ಶಿಕ್ಷಕರು ಪ್ರತಿಯೋರ್ವ ವಿದ್ಯಾರ್ಥಿಗಳ ಬಗ್ಗೆ ವೈಯುಕ್ತಿಕ ಗಮನ ಹರಿಸಿ, ಪೋಷಕರೊಂದಿಗೆ ಸಮಾಲೋಚನೆ ಮಾಡಿ ಮನೆಯಲ್ಲಿಯೂ ವಿದ್ಯಾರ್ಥಿಗೆ ಪೂರಕ ವಾತಾವರಣ ಕಲ್ಪಿಸಲು ವಿಶೇಷ ಮುತುವರ್ಜಿ ವಹಿಸುವಂತೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಯಲ್ಲಮ್ಮ ಹಾಗೂ ಉಮಾ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಪೂರಕ ಅಗತ್ಯ ಮಾಹಿತಿ, ಕಾರ್ಯ ಯೋಜನೆಗಳ ಬಗ್ಗೆ ಕಾರ್ಯಗಾರದಲ್ಲಿ ಮಾಹಿತಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ಉಡುಪಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ನಿರುಪಮಾ ಪ್ರಸಾದ್ ಶೆಟ್ಟಿ, ಪ್ರಾಂಶುಪಾಲರಾದ ಜಗದೀಶ್, ಪ್ರೌಢಶಾಲೆ ವಿಭಾಗದ ಮುಖ್ಯೋಪಾಧ್ಯಾಯರಾದ ಇಂದಿರಾ ಹಾಗೂ ವಿವಿಧ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜಿನ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here