ಉಜಿರೆ: ಯಕ್ಷಗಾನ ರಂಗ ಸನಾತನ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಪ್ರಸಾರದ ಬಯಲು ವಿಶ್ವವಿದ್ಯಾಲಯ: ಕೆ. ಪ್ರತಾಪಸಿಂಹ ನಾಯಕ್

0
16

ಉಜಿರೆ: ಕರಾವಳಿ ಜಿಲ್ಲೆಗಳ ಗಂಡುಕಲೆಯಾದ ಯಕ್ಷಗಾನ ರಂಗವು ಸನಾತನ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಪ್ರಸಾರದ ಬಯಲು ವಿಶ್ವವಿದ್ಯಾಲಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಭಾನುವಾರ ಉಜಿರೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಶ್ರಯದಲ್ಲಿ ರಾಮಕೃಷ್ಣ ಸಭಾಭವನದಲ್ಲಿ ಎರಡು ದಿನ ನಡೆದ “ಮಹಿಳಾ ಯಕ್ಷ ಸಂಭ್ರಮ” ಕಾರ್ಯಕ್ರಮದಲ್ಲಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಲಾವಿದರು ತಮಗೆ ಸಿಕ್ಕಿದ ಅವಕಾಶಗಳ ಸದುಪಯೋಗ ಪಡೆದು ನಿರಂತರ ಪ್ರಯತ್ನ, ಸಾಧನೆ ಮಾಡಿದರೆ ಯಕ್ಷಗಾನದ ಧ್ರುವತಾರೆಗಳಾಗಿ ಮಿಂಚಬಹುದು. ಯಕ್ಷಗಾನ ಮತ್ತು ತಾಳಮದ್ದಳೆಯಲ್ಲಿ ಮಾತುಗಾರಿಕೆಗೆ ಮಹತ್ವವಿದ್ದು, ಮಾತು ಪಾತ್ರಕ್ಕೆ ಪೂರಕವಾಗಿರಬೇಕು. ಯಕ್ಷಗಾನವು ಪೌರಾಣಿಕ ಪ್ರಸಂಗಗಳ ಮೂಲಕ ಧರ್ಮಪ್ರಭಾವನೆಯೊಂದಿಗೆ ಮಾನವೀಯ ಮೌಲ್ಯಗಳ ಉದ್ದೀಪನ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರೇರಣೆ, ಮಾರ್ಗದರ್ಶನ ನೀಡುತ್ತದೆ. ಯಕ್ಷಗಾನದಲ್ಲಿ ಮಹಿಳಾ ಕಲಾವಿದರೂ ಉನ್ನತ ಸಾಧನೆ ಮಾಡುತ್ತಿರುವ ಬಗ್ಯೆ ಅವರು ಶ್ಲಾಘಿಸಿ ಅಭಿನಂದಿಸಿದರು.
ತ್ರಾಸವಿಲ್ಲದೆ ಪ್ರಾಸಬದ್ಧವಾಗಿ ಮಾತುಗಾರಿಕೆಯಲ್ಲಿ ಪ್ರಸಿದ್ಧ ಕಲಾವಿದರಾಗಿ ಮೆರೆದ ಕೀರ್ತಿಶೇಷ ಕುಂಬ್ಲೆ ಸುಂದರ ರಾವ್ ಅವರಂತಹ ಹಿರಿಯ ಕಲಾವಿದರ ಮಾತುಗಾರಿಕೆ ಕೌಶಲವನ್ನು ಅವರು ಧನ್ಯತೆಯಿಂದ ಸ್ಮರಿಸಿದರು.
ಭಾಗವತಿಕೆಯಲ್ಲಿ ಉದಯೋನ್ಮುಖ ಕಲಾವಿದರಾಗಿ ಮಿಂಚುತ್ತಿರುವ ಕು. ಪಾವನಾ, ಶ್ರೀಶ ಭಟ್ಕಳ ಮತ್ತು ತೃಪ್ತಿ ಸುವರ್ಣ ಅವರನ್ನು ಗೌರವಿಸಲಾಯಿತು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ದಯಾನಂದ ಬೆಳಾಲು, ಭುಜಬಲಿ ಧರ್ಮಸ್ಥಳ, ಜಾರಪ್ಪ ಪೂಜಾರಿ ಬೆಳಾಲು, ಉಜಿರೆಯ ಪ್ರೇರಣಾ ಮಹಿಳಾ ಸಂಜೀವಿನಿ ಒಕ್ಕೂಟದ ವಿನುತಾ ರಜತ್ ಗೌಡ ಮೊದಲಾದವರು ಉಪಸ್ಥಿತರಿದ್ದರು.
ರಾಜೇಂದ್ರ ಕಟೀಲು ಕಾರ್ಯಕ್ರಮ ನಿರ್ವಹಿಸಿದರು. ಎರಡು ದಿನ ನಡೆದ ಮಹಿಳಾ ಯಕ್ಷ ಸಂಭ್ರಮದಲ್ಲಿ ಬಡಗುತಿಟ್ಟು ಮತ್ತು ತೆಂಕುತಿಟ್ಟು ಯಕ್ಷಗಾನ ಪ್ರದರ್ಶನ, ವಿಚಾರಸಂಕಿರಣ, ತಾಳಮದ್ದಳೆ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here