ಮುರುಡೇಶ್ವರ ಶ್ರೀ ಸಾರ್ವಜನಿಕ ಗಣೇಶೋತ್ಸವ ಸುವರ್ಣ ಸಂಭ್ರಮದಲ್ಲಿ ಉಮೇಶ ಮುಂಡಳ್ಳಿ ಭಜನಾಮೃತ

0
20

ಭಟ್ಕಳ : ಶ್ರೀ ಸಾರ್ವಜನಿಕ ಶ್ರೀ ಸಿದ್ಧಿವಿನಾಯಕ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮದ ಅಂಗವಾಗಿ, ವಿಶ್ವಪ್ರಸಿದ್ಧ ಮುರುಡೇಶ್ವರದಲ್ಲಿ ಭಕ್ತಿಭಾವದ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ, ಕವಿ ಹಾಗೂ ಸುಗಮಸಂಗೀತ ಕಲಾವಿದ ಉಮೇಶ ಮುಂಡಳ್ಳಿ ಅವರ ಸಾರಥ್ಯದಲ್ಲಿ “ಭಜನಾಮೃತ’ ಕಾರ್ಯಕ್ರಮ ಮಂಗಳವಾರ ಸಂಜೆ ನಡೆಯಿತು.

ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಉಮೇಶ ಮುಂಡಳ್ಳಿಯವರು, ನಿನಾದ ಕಲ್ಚರಲ್ ಅಕಾಡೆಮಿ ಮೂಲಕ ಹಲವು ವರ್ಷಗಳಿಂದ ಭಕ್ತಿ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸುವರ್ಣ ಸಂಭ್ರಮದ ಈ ವಿಶೇಷ ಸಂದರ್ಭದಲ್ಲಿ ಉಮೇಶ ಮುಂಡಳ್ಳಿಯವರು ಭಕ್ತಿಗೀತೆ, ಭಜನೆ ಹಾಗೂ ಸುಮಧುರ ಸಂಗೀತದ ಮೂಲಕ ಶ್ರೀ ಗಣಪತಿಯ ಆರಾಧನೆಯನ್ನು ನಡೆಸಿಕೊಟ್ಟರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ‘ಭಜನಾಮೃತ’ ಕಾರ್ಯಕ್ರಮದಲ್ಲಿ ಭಕ್ತರು ಭಕ್ತಿಭಾವದಿಂದ ಸಂಗೀತವನ್ನು ಆಲಿಸಿದರು.
ಕಾರ್ಯಕ್ರಮದಲ್ಲಿ ಉಮೇಶ ಮುಂಡಳ್ಳಿ ಅವರೊಂದಿಗೆ ಹಾರ್ಮೋನಿಯಂ ಹಾಗೂ ಗಾಯನದಲ್ಲಿ ಉಮೇಶ ಶಿರೂರು ಸಾಥ್ ನೀಡಿದರು. ರಿದಂ ಪ್ಯಾಡ್ ನಲ್ಲಿ ಶ್ಯಾಮ್ ಶಿರೂರು ಸಹಕರಿಸಿದರು.

ಕಾರ್ಯಕ್ರಮದ ಬಳಿಕ ಮುರುಡೇಶ್ವರ ಸಾರ್ವಜನಿಕ ಶ್ರೀ ಸಿದ್ಧಿವಿನಾಯಕ ಸೇವಾ ಟ್ರಸ್ಟ್, ಮುರುಡೇಶ್ವರ ವತಿಯಿಂದ ಉಮೇಶ ಮುಂಡಳ್ಳಿ ಸೇರಿದಂತೆ ಕಲಾವಿದರನ್ನು ಆತ್ಮೀಯವಾಗಿ ಸಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸುವರ್ಣ ಸಂಭ್ರಮದ ಅಂಗವಾಗಿ ನಡೆದ ಈ ಭಕ್ತಿಸಂಗೀತ ಕಾರ್ಯಕ್ರಮವು ಗಣೇಶೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.