ಉಡುಪಿಗೆ ನಾಳೆ (ನ.13) ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ : ಎಫ್‌ಎಂ ಕೇಂದ್ರ ಲೋಕಾರ್ಪಣೆ

0
84

ಉಡುಪಿ : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನವೆಂಬರ್ 13ರಂದು ಉಡುಪಿ ಜಿಲ್ಲೆಗೆ ಅಧಿಕೃತ ಭೇಟಿ ನೀಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ನವೆಂಬರ್ 13ರಂದು ಬೆಳಿಗ್ಗೆ 8.45ಕ್ಕೆ ಉಡುಪಿ ರೈಲು ನಿಲ್ದಾಣಕ್ಕೆ ಆಗಮಿಸಲಿರುವ ಸಚಿವರನ್ನು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಗಣ್ಯರು ಸ್ವಾಗತಿಸಲಿದ್ದಾರೆ. ಬಳಿಕ ಬೆಳಿಗ್ಗೆ 9 ಗಂಟೆಗೆ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆಯಲಿದ್ದಾರೆ.

ನಂತರ ಬೆಳಿಗ್ಗೆ 10 ಗಂಟೆಗೆ ಅಜ್ಜರಕಾಡಿನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಎಫ್‌ಎಂ ರೇಡಿಯೋ ಕೇಂದ್ರವನ್ನು ಸಚಿವರು ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಿದ್ದಾರೆ. ಈ ಮೂಲಕ ಉಡುಪಿ ಭಾಗದ ಜನರಿಗೆ ರೇಡಿಯೋ ಪ್ರಸಾರದ ಹೊಸ ಸೌಲಭ್ಯ ದೊರೆಯಲಿದೆ.

ಉಡುಪಿಯ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ಬಳಿಕ ಸಚಿವರು ಮಂಗಳೂರಿಗೆ ತೆರಳಲಿದ್ದು, ಅಲ್ಲಿ ನಡೆಯಲಿರುವ ವಿಶೇಷ ವಂದೇ ಭಾರತ್ ರೈಲು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ರೈಲ್ವೆ ಸಚಿವರ ಈ ಭೇಟಿಯು ಕರಾವಳಿ ಭಾಗದ ರೈಲ್ವೆ ಹಾಗೂ ಸಂಪರ್ಕ ವ್ಯವಸ್ಥೆಯ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವ ಪಡೆದಿದೆ.