ಇತಿಹಾಸವನ್ನು ತಿಳಿಸುವ ವಿಜಯನಗರ ವೀರಬುಕ್ಕಣ್ಣ ಒಡೆಯನ ಕಾಲದ ಶಾಸನವೊಂದು ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಎಕ್ಕರಬೆಟ್ಟಿನ ಶಿವರಾಮ ಶೆಟ್ಟರ ಮನೆಯ ಮೇಲ್ಭಾಗದ ಗದ್ದೆಯಲ್ಲಿದೆ. ಇದೊಂದು ಅಪ್ರಕಟಿತ ಶಿಲಾ ಶಾಸನವಾಗಿದ್ದು, ಈ ಶಾಸನದ ಉದ್ದ 90 ಸೆ.ಮೀ ಮತ್ತು ಅಗಲ 59 ಸೆ.ಮೀ ಗಳಿದ್ದು, ಮೇಲ್ಭಾಗದ ಉಬ್ಬುಶಿಲ್ಪವನ್ನು ಸೇರಿದಂತೆ ಎತ್ತರ ಸುಮಾರು 125 ಸೆ.ಮೀಯಲ್ಲಿದೆ. ಕಣಶಿಲೆಯಿಂದ ಕೂಡಿದೆ. ಈ ಶಾಸನವು 34 ಸಾಲುಗಳುಳ್ಳ ಕನ್ನಡ ಭಾಷೆ ಮತ್ತು ಲಿಪಿಯಲ್ಲಿದೆ.
ಈ. ಶಾಸನದ ಮೇಲ್ಭಾಗದಲ್ಲಿ ಸೂರ್ಯ ಚಂದ್ರ, ಬಲಭಾಗದಲ್ಲಿ ಸೊಂಟಕ್ಕೆ ಎಡಗೈ ಕೊಟ್ಟು ನಿಂತಿರುವ ಆಂಜನೇಯ, ಮಧ್ಯದಲ್ಲಿ ಶಿವಲಿಂಗ ಹಾಗೂ ಎಡ ಭಾಗದಲ್ಲಿ ದೀಪದ ಕಂಬ ಹಾಗೂ ಒಂದು ಹಸುವಿನ ಉಬ್ಬು ಶಿಲ್ಪವಿದೆ.
ಈ ಶಾಸನವನ್ನು ತುಮಕೂರು ವಿಶ್ವವಿದ್ಯಾನಿಲಯದ, DOSR ಇತಿಹಾಸ ಮತ್ತು ಪುರಾತತ್ವ ವಿಭಾಗದ ಅಧ್ಯಕ್ಷರಾದ ಪ್ರೊ. ಎಂ ಕೊಟ್ರೇಶ್ ರವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಸಂಶೋಧನೆ ಕೈಗೊಂಡಿರುವ ವೈಶಾಲಿ ಜಿ.ಆರ್ ರವರ ಕ್ಷೇತ್ರಕಾರ್ಯದಲ್ಲಿ ಲಭ್ಯವಾಗಿದೆ.
ಶ್ರೀ ಶಂಕರನಾರಾಯಣ ದೇವಸ್ಥಾನದ ಅರ್ಚಕರಾದ ಶಿವಪ್ರಸಾದ್ ಅಡಿಗರ ಈ ಶಾಸನವನ್ನು ಮೊದಲಿಗೆ ಗುರುತಿಸಿದ್ದು, ಆ ಮೂಲಕ ಈ ಶಾಸನದ ಸ್ಪಷ್ಟತೆಗಾಗಿ ಸಂಶೋಧಕರಿಗೆ ತಿಳಿಸಿ, ಆ ಶಾಸನದ ಅರ್ಥೈಸುವಲ್ಲಿ ಸಾಕಷ್ಟು ಸಹಕರಿಸಿದ್ದಾರೆ. ಇದಕ್ಕಾಗಿ ASI ನ ಶಾಸನವಿಭಾಗದಿಂದ ಶಾಸನತಜ್ಞೆಯಾದ ಡಾ. ಶ್ರೀದೇವಿ ತೇಜಸ್ವಿನಿಯವರು ಹಾಗೂ ಪಡಿಯಚ್ಚು ಸಹಾಯಕರಾದ ನಾಗಣ್ಣನವರು ಈ ಶಾಸನದ ಪಡಿಯಚ್ಚನ್ನು ತೆಗೆದಿದ್ದು, ಈ ಶಾಸನದ ಕುರಿತು ಹೆಚ್ಚಿನ ಅಧ್ಯಯನ ಕೈಗೊಂಡಿರುತ್ತಾರೆ.
ಶಾಸನದ ಕಾಲವನ್ನು ಗುರುತಿಸುವುದಾದರೆ ಅದು ಶಕವರ್ಷ 1291, ಸೌಮ್ಯ ಸಂವತ್ಸರ, ಮಾರ್ಗಶಿರಮಾಸ, ಶು೧, ಗುರುವಾರ ಇದಕ್ಕೆ ಸಂವಾದಿಯಾಗಿ ಸಾ.ಶಕ 1369 ರ ನವೆಂಬರ್ ೧ಕ್ಕೆ ಕಾಲಘಟ್ಟವು ಸರಿಹೊಂದಿದೆ.ಈ ಶಾಸನದ ಪ್ರಾರಂಭದಲ್ಲಿ ಶಿವಸ್ತುತಿ, ಗಣಪತಿ ಸ್ತುತಿಸಿ ನೇರವಾಗಿ ವಿಜಯನಗರ ಅರಸು ವೀರ ಬುಕ್ಕಣ್ಣ ಒಡೆಯ ನಿರೂಪ ಎಂದು ಹೇಳಿದೆ. ಬಳಿಕ. ಬಾರಕೂರ ರಾಜ್ಯಪಾಲನಾದ ಗೋಪರಸನು ಈ ಶಾಸನದ ನಿರೂಪಣೆಯನ್ನು ಮಾಡಿದ ಶಾಸನ ಪಠ್ಯವನ್ನು ಮುಂದುವರೆದಿದೆ. ಆ ನಿರೂಪವು ಕೋಟೇಶ್ವರ ದೇವರು ಹಾಗೂ ಚವುಡೇಶ್ವರಿಯ ದೇವರಿಗಾಗಿ ಅರಮನೆಯ ಕಾಣಿಕೆಯಾಗಿ ನೀಡಿರುವ ದಾನದ ಕುರಿತಾಗಿದೆ. ಅಂಪಾರಿನ ಚತುಸ್ಸೀಮೆಯನ್ನು ದಾನದ ಮೂಲವಾಗಿ ಕೆಲವು ಪ್ರದೇಶಗಳನ್ನು ಹೇಳಿದೆ. ಅಲ್ಲದೇ ಕೋಟೇಶ್ವರ ದೇವರ ದೀವಿಗೆಗೆ ವರ್ಷವೊಂದಕ್ಕೆ ಐದು ಹೊನ್ನುಗಳನ್ನು ಕೊಡಬೇಕಾಗಿ ಈ ಶಾಸನದಲ್ಲಿ ಹೇಳಿದೆ. ಸೇನಬೋವ, ಎಡೆಹಾಳಿ, ಕುಪ್ಪಾರು ದಾನದ ಚುತುಸ್ಸೀಮೆಯ ಮುಂತಾದವುಗಳ ಉಲ್ಲೇಖ ಬರುತ್ತದೆ. ಈ ಶಾಸನದ ನಿರೂಪವು ಎಡೆನಾಡ ವಿಷ್ಣುಮೂರ್ತಿ, ದುರ್ಗಾoಬ ದೇವತೆ ಮತ್ತು ವೊಳತ್ತೂರು ಚವುಡೇಶ್ವರಿ ದೇವಿ ಸಾಕ್ಷಿಯಾಗಿರುವ ಪಠ್ಯವಿದೆ. ಎಂದಿನಂತೆ ಕಡೆಯ ೭ ಸಾಲುಗಳು ಶಾಪಶಯದಿಂದ ಕೂಡಿದ್ದು, ಕೊನೆಯ ಸಾಲಿನಲ್ಲಿ ಗೋಪರಸನ ಬರಹವೆಂದು ಹೇಳಿದೆ.
ಈ ಶಾಸನವು ಜೈನರದ್ದಾಗಿತ್ತೆoಬ ಅಭಿಪ್ರಾಯವು ಆ ಪ್ರದೇಶದಲ್ಲಿ ಜನರಲ್ಲಿತ್ತು. ಸುಶೀಲಾ ಶಿವರಾಂ ಶೆಟ್ಟಿ, ಜಗದೀಶ್ ಶೆಟ್ಟಿ, ರೋಷಿನಿ ಶೆಟ್ಟಿ, ವನಜಾ ಶೆಟ್ಟಿ, ವೆಂಕಟರಮಣ ಕೆರಿಯ ಮತ್ತು ಕೂಡಿಗೆ ಚಂದ್ರಶೇಖರ ಕನ್ನಂತ ಮುಂತಾದವರು ಉಪಸ್ಥಿತರಿದ್ದರೆಂದು ಪ್ರದೀಪ್ ಕುಮಾರ್ ಬಸ್ರೂರು ಇವರು ವರದಿ ಮಾಡಿದ್ದಾರೆ.