ಮಂಗಳೂರು : ಆಟಿ ಅಮಾವಾಸ್ಯೆ ಪ್ರಯುಕ್ತ ಉಚಿತ ಹಾಲೆಮರದ ಕಷಾಯ ವಿತರಣೆ

0
8

ಆಟಿ ಅಮಾವಾಸ್ಯೆ ಪ್ರಯುಕ್ತ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಹಾಗೂ ಆರೋಗ್ಯ ಭಾರತಿ ಮಂಗಳೂರು ಇದರ ಸಹಯೋಗದಲ್ಲಿ ಉಚಿತವಾಗಿ ಹಾಲೆ ಮರದ ಕಷಾಯ ವಿತರಣಾ ಕಾರ್ಯಕ್ರಮ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ, ವೆಲೆನ್ಸಿಯ ಹಾಗೂ ಕದ್ರಿಯಲ್ಲಿ ನಡೆಯಿತು. ಆಸ್ಪತ್ರೆಯ ಕದ್ರಿ ಶಾಖೆಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯ ವೈದ್ಯರೂ ಆರೋಗ್ಯ ಭಾರತಿಯ ಜಿಲ್ಲಾ ಉಪಾಧ್ಯಕ್ಷರೂ ಆದ ಡಾ ಸಚಿನ್ ನಡ್ಕ, ಆಸ್ಪತ್ರೆಯ ವೈದ್ಯೆ ಡಾ ಅನುಷಾ, ಆರೋಗ್ಯ ಭಾರತಿಯ ಪ್ರಾಂತ ಉಪಾಧ್ಯಕ್ಷರೂ ಜಿಲ್ಲಾ ಗೌರವಾಧ್ಯಕ್ಷರೂ ಆದ ಡಾ ಮುರಳೀ ಮೋಹನ ಚೂಂತಾರು, ಜಿಲ್ಲಾ ಅಧ್ಯಕ್ಷರಾದ ಡಾ ಈಶ್ವರ ಭಟ್ ಪಳ್ಳಾದೆ, ವಿಭಾಗ ಸಂಚಾಲಕರಾದ ಪುರುಷೋತ್ತಮ ದೇವಸ್ಯ, ಕಾರ್ಯದರ್ಶಿಗಳಾದ ಉಮೇಶ್ ಪ್ರಭು ಬನ್ನೂರು, ಜೊತೆ ಕಾರ್ಯದರ್ಶಿಗಳಾದ ದಿನೇಶ್ ಚಂದ್ರಗಿರಿ ಹಾಗೂ ಯೋಗ ಗುರುಗಳಾದ ರವೀಶ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಡಾ ಮುರಲೀ ಮೋಹನ ಚೂಂತಾರು ಅವರು ಮಾತನಾಡಿ ಆಟಿ ಅಮಾವಾಸ್ಯೆಯಂದು ಹಾಲೆ ಮರದ ಕಷಾಯ ಕುಡಿಯುವ ನಮ್ಮ ತುಳುನಾಡಿನ ಸಂಪ್ರದಾಯದ ಮಹತ್ವವನ್ನು ತಿಳಿಸಿದರು. ಡಾ ಸಚಿನ್ ನಡ್ಕ ಅವರು ಮಾತನಾಡಿ ಹಾಲೆ ಮರದ ಕಷಾಯ ಕುಡಿಯುವುದರ ಮೂಲಕ ಶರೀರದ ಆರೋಗ್ಯ ಕಾಪಾಡುವಂತಾಗಲಿ ಎಂದು ಹಾರೈಸುತ್ತಾ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.

ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ವೆಲೆನ್ಸಿಯ ಹಾಗೂ ಕದ್ರಿಯ ಹತ್ತಿರದ ಪ್ರದೇಶಗಳ ಸುಮಾರು ಸಾವಿರದಷ್ಟು ಜನರು ಇದರ ಪ್ರಯೋಜನವನ್ನು ಪಡೆದರು.