ವಿದ್ಯಾದಾನ ಶ್ರೇಷ್ಠ ದಾನ : ಹೆಲ್ಪ್ ಲೈನ್ ಸೇವಾ ತಂಡದಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ

0
66

ಬಜಪೆ : ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಭದ್ರ ಬುನಾದಿ ಎಂಬ ಉದ್ದೇಶದೊಂದಿಗೆ ಹೆಲ್ಪ್ ಲೈನ್ ಸೇವಾ ತಂಡವು ಮತ್ತೊಂದು ಸಮಾಜಮುಖಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದಾನಿಗಳ ಸಹಕಾರದಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಪಡುಪೆರಾರ, ಬಜ್ಪೆ ಇಲ್ಲಿನ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.

“ವಿದ್ಯಾದಾನ ಶ್ರೇಷ್ಠ ದಾನ” ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಉದ್ದೇಶದಿಂದ ಪುಸ್ತಕ ವಿತರಣೆ ಮಾಡಲಾಯಿತು. ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ದಾನಿಗಳ ಸಹಕಾರದಿಂದ ಈ ಪುಣ್ಯ ಕಾರ್ಯ ನೆರವೇರಿದ್ದು, ಹೆಲ್ಪ್ ಲೈನ್ ಸೇವಾ ತಂಡದ ಸೇವಾ ಮನೋಭಾವಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕಾರ್ಯಕ್ರಮದಲ್ಲಿ ಸಿದ್ದಕಟ್ಟೆ ತೆರಿಗೆ ಪಾವತಿದಾರರ ಹಾಗೂ ತೆರಿಗೆ ಉಳಿತಾಯಗಾರರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ಅಧ್ಯಕ್ಷೆ ಪ್ರೇಮ ಕೋಟ್ಯಾನ್, ಸಮಾಜಸೇವಕರಾದ ಕೃಷ್ಣ ಕುಳಾಯಿ, ಹೆಲ್ಪ್ ಲೈನ್ ಸೇವಾ ತಂಡದ ಸ್ಥಾಪಕ ಮಹೇಶ್ ಅಮಿನ್, ಸದಸ್ಯರಾದ ಜಯಂತ್ ಕೊಳಂಬೆ, ಪ್ರಮೀಳಾ, ಸರಸ್ವತಿ ಹಾಗೂ ವನಜ ಚಂದ್ರಪುರ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಶಾಲಾ ಮಕ್ಕಳು ಹಾಗೂ ಪೋಷಕರು ಉತ್ಸಾಹದಿಂದ ಭಾಗವಹಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಫ್ಲಾವಿಯ ಲೀನಾ ವಾಸ್ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷೆ ದೇವಕಿ ವಹಿಸಿದ್ದರು. ಸಹ ಶಿಕ್ಷಕಿ ಭಾರತಿ ಕೆ. ಅವರು ಧನ್ಯವಾದ ಅರ್ಪಿಸಿದರು.

ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಮಾಜಮುಖಿ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಜನಸೇವೆಯನ್ನು ಮುಂದುವರಿಸುವ ಸಂಕಲ್ಪವನ್ನು ಹೆಲ್ಪ್ ಲೈನ್ ಸೇವಾ ತಂಡ ವ್ಯಕ್ತಪಡಿಸಿದೆ. ಈ ಯೋಜನೆಗೆ ಸಹಕರಿಸಿದ ಎಲ್ಲ ದಾನಿಗಳು, ಸಮಾಜಸೇವಕರು ಹಾಗೂ ಶುಭ ಹಾರೈಕೆ ನೀಡಿದ ಎಲ್ಲರಿಗೂ ತಂಡದ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ ಎಂದು ಹೆಲ್ಪ್ ಲೈನ್ ಸೇವಾ ತಂಡ ಮಂಗಳೂರು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here