ಮಂಗಳೂರು : 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ತನ್ನ ಅಂತರರಾಷ್ಟ್ರೀಯ ಸಂಘಟನಾ ವಿಸ್ತರಣೆಯ ಅಂಗವಾಗಿ ಥಾಯ್ಲೆಂಡ್ ಘಟಕದ ಅಧ್ಯಕ್ಷರಾಗಿ ಕಡುಬ ತಾಲೂಕಿನ ಬಲ್ಯ ಗ್ರಾಮದ ಮೂಲದ ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾದ ಶ್ರೀ ವಿನಯ ರೈ ಅವರನ್ನು ನೇಮಕ ಮಾಡಲಾಗಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಡುಬ ತಾಲೂಕಿನ ಬಲ್ಯ ಗ್ರಾಮದವರಾದ ವಿನಯ ರೈ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿ ಪಡೆದಿದ್ದು, ಪುಣೆಯ ಪ್ರೋಮ್ಯಾಕ್ ಸಂಸ್ಥೆಯಲ್ಲಿ ಸಾಮಗ್ರಿ ನಿರ್ವಹಣಾ ವಿಭಾಗದಲ್ಲಿ ವಿಶೇಷ ತರಬೇತಿ ಪಡೆದಿದ್ದಾರೆ. ಮಹಾರಾಷ್ಟ್ರದ ಇಂಡಿಯನ್ ಪೆಟ್ರೋಕೆಮಿಕಲ್ಸ್ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ಫಿನೋಲೆಕ್ಸ್ ಸಂಸ್ಥೆಗಳಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಳಿಕ, 1997ರಿಂದ ಥಾಯ್ಲೆಂಡ್‌ನ ಇಂಡೋರಾಮಾ ಸಮೂಹ ಸಂಸ್ಥೆಗೆ ಸೇರಿ, ಪ್ರಸ್ತುತ ಇಂಡೋರಾಮಾ ವೆಂಚರ್ಸ್ ಥಾಯ್ಲೆಂಡ್ ಸಂಸ್ಥೆಯಲ್ಲಿ ವಾಣಿಜ್ಯ ವಿಭಾಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವೃತ್ತಿಜೀವನದ ಜೊತೆಗೆ ವಿದೇಶದಲ್ಲಿರುವ ಕನ್ನಡಿಗರು ಹಾಗೂ ತುಳುವರನ್ನು ಸಂಘಟಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. 2000ರಲ್ಲಿ ಥಾಯ್ಲೆಂಡ್‌ನಲ್ಲಿರುವ ಕನ್ನಡಿಗರನ್ನು ಒಗ್ಗೂಡಿಸಿ ಥಾಯ್ ಕನ್ನಡ ಬಳಗ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅದರ ಆರಂಭಿಕ ಅವಧಿಯಲ್ಲಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂದು ಈ ಸಂಘವು ಸುಮಾರು 200ಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
2010ರಲ್ಲಿ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವು ಮತ್ತು ಬೆಳವಣಿಗೆಯ ಉದ್ದೇಶದಿಂದ ತುಳುಕೂಟ ಥಾಯ್ಲೆಂಡ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ ಅವರು, ಕಳೆದ ಐದು ವರ್ಷಗಳಿಂದ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಸಂಸ್ಥೆಯನ್ನು ಸುಮಾರು 100ಕ್ಕೂ ಅಧಿಕ ಸದಸ್ಯರನ್ನು ಹೊಂದಿದ ಬಲಿಷ್ಠ ಸಂಘಟನೆಯಾಗಿ ಬೆಳೆಸಿದ್ದಾರೆ.
ಅವರ ನೇತೃತ್ವದಲ್ಲಿ ತುಳುಕೂಟ ಥಾಯ್ಲೆಂಡ್ ಮೂಲಕ ಥಾಯ್ಲೆಂಡ್ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತುಳು ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅನೇಕ ತುಳು ಚಲನಚಿತ್ರಗಳನ್ನು ಥಾಯ್ಲೆಂಡ್‌ನಲ್ಲಿ ಪ್ರದರ್ಶಿಸಿರುವುದಲ್ಲದೆ, ತುಳು ಕಲಾವಿದರು, ಸಾಹಿತ್ಯಿಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಆಹ್ವಾನಿಸಿ ತುಳು ಸಂಸ್ಕೃತಿಯ ಪ್ರಚಾರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಕ್ರೀಡೆ, ಕಲೆ ಹಾಗೂ ಸಂಸ್ಕೃತಿ ಕ್ಷೇತ್ರದ ತುಳುನಾಡಿನ ಅನೇಕ ಪ್ರತಿಭೆಗಳಿಗೆ ಆರ್ಥಿಕ ನೆರವು ನೀಡಿರುವ ಅವರು, ಕೋವಿಡ್ ಅವಧಿಯಲ್ಲಿ ಥಾಯ್ಲೆಂಡ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ತುಳುನಾಡಿನ ಜನರಿಗೆ ನೆರವಾಗುವ ಮೂಲಕ ಮಾನವೀಯ ಸೇವೆಯನ್ನೂ ಸಲ್ಲಿಸಿದ್ದಾರೆ.
ಅವರ ಸಂಘಟನಾ ಸಾಮರ್ಥ್ಯ, ಸಮಾಜಸೇವೆ ಹಾಗೂ ತುಳು ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಉಳಿವು-ಬೆಳವಣಿಗೆಗೆ ಸಲ್ಲಿಸಿರುವ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ವಿನಯ ರೈ ಅವರನ್ನು ಥಾಯ್ಲೆಂಡ್ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.
ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀಹರಿನಾರಾಯಣ ದಾಸ್ ಅಸ್ರಣ್ಣ ಕಟೀಲ್, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ, ಕೇಂದ್ರೀಯ ಸಮಿತಿ ಕಾರ್ಯದರ್ಶಿ ಅರವಿಂದ್ ಬೆಲ್ಚಾಡ ಮತ್ತು ಕೇಂದ್ರೀಯ ಸಮಿತಿ ಸಂಚಾಲಕ ವಿಶ್ವನಾಥ ಆಚಾರ್ಯ ಅವರು ಹರ್ಷದಿಂದ ಸ್ವಾಗತಿಸಿ, ನೂತನ ಥಾಯ್ಲೆಂಡ್ ಘಟಕದ ಅಧ್ಯಕ್ಷರಾದ ವಿನಯ ರೈ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.

