ಉಡುಪಿ: ತುಳುನಾಡಿನ ನಾಡು ನುಡಿಯ ಪರಂಪರೆಯ ರಕ್ಷಣೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿರುವ ಪಾರಂಪರಿಕ ನಾಟಿ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು ಅವರು ತುಳುವ ಮಹಾಸಭೆ ಉಡುಪಿ ತಾಲೂಕು ಘಟಕದ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.
ವಿಶ್ವನಾಥ ಆಚಾರ್ಯ ಅವರು ಆರ್.ಎಚ್.ಪಿ. ಆಯುರ್ವೇದ ಪೆರ್ಡೂರು ಸಂಸ್ಥೆಯ ಮಾಲಕರು ಹಾಗೂ ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ (ರಿ.) ಇದರ ಅಜೀವ ಸದಸ್ಯರಾಗಿದ್ದು, ತುಳು ನಾಡುನೆಲದ ಪಾರಂಪರಿಕ ಮರ್ಮಚಿಕಿತ್ಸಾ ಪರಂಪರೆಯನ್ನು ಮುಂದುವರಿಸುತ್ತಿರುವ ಪ್ರಮುಖ ನಾಟಿ ವೈದ್ಯರಲ್ಲಿ ಒಬ್ಬರು. ತುಳು ಸಾಂಸ್ಕೃತಿಕ ಸಂಘಟಕ ಎಂಬ ನಿಟ್ಟಿನಲ್ಲಿ ಅನೇಕ ಪ್ರಾದೇಶಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಅವರು ಶ್ರೀ ಕ್ಷೇತ್ರ ವರ್ತೆ ಕಲ್ಕುಡ ತೂಕತ್ತೆರಿ ದೈವಸ್ಥಾನ ಕೈರು ಪೆರ್ಡೂರು ಇದರ ಆಡಳಿತ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ವಿಶ್ವ ಬ್ರಾಹ್ಮಣ ಯುವ ಸಂಘಟನೆ ಕಟಪಾಡಿ ಹಾಗೂ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದು, ಸಮಾನ ಮನಸ್ಕರೊಂದಿಗೆ ಸಾಮಾಜಿಕ ಒಗ್ಗಟ್ಟಿಗೆ ಶ್ರಮಿಸುತ್ತಿದ್ದಾರೆ.
ತುಳುವ ಮಹಾಸಭೆ, 1928ರಲ್ಲಿ ಎಸ್. ಯು. ಪಣಿಯಾಡಿ ಅವರ ನೇತೃತ್ವದಲ್ಲಿ ಉಡುಪಿಯಲ್ಲಿ ಸ್ಥಾಪಿತವಾದ ಈ ಸಂಸ್ಥೆ, ಇತ್ತೀಚೆಗೆ ತನ್ನ ಪುನಶ್ಚೇತನ ಗುರಿಯನ್ನು ಘೋಷಿಸಿದೆ. ಇದರಲ್ಲಿ ತುಳುನಾಡಿನ ಕಲಾ, ಸಾಹಿತ್ಯ, ಜನಪದ ಪರಂಪರೆ, ತುಳುನಾಡ ಕಳರಿ ತರಬೇತಿ, ಮರ್ಮ ಚಿಕಿತ್ಸೆ, ನಶಿಸಿಹೋಗುತ್ತಿರುವ ದೈವ ಆರಾಧನೆಗಳ ಪುನರುಜ್ಜೀವನ, ಬಸ್ರೂರು ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ, ಮತ್ತು ಸಾಮಾಜಿಕ ಸೌಹಾರ್ದತೆ ಉತ್ತೇಜಿಸುವ ಪ್ರಮುಖ ಕಾರ್ಯತಂತ್ರಗಳು ಸೇರಿವೆ.
ಈ ನಿಟ್ಟಿನಲ್ಲಿ ಪ್ರತಿ ತಾಲೂಕು ಮಟ್ಟದಲ್ಲಿ ಅಲ್ಲಲ್ಲಿ ಪರಸ್ಪರ ಸಹಾಯ ಕೂಟಗಳನ್ನು ರೂಪಿಸಲಾಗುತ್ತಿದ್ದು, ಉಡುಪಿ ತಾಲೂಕಿಗೆ ವಿಶ್ವನಾಥ ಆಚಾರ್ಯ ಅವರ ನೇತೃತ್ವ ಮಹತ್ತರ ಶಕ್ತಿಯನ್ನು ನೀಡಲಿದೆ. ನಾಡು ನುಡಿಯ ಸೇವೆಯಲ್ಲಿ ಅವರು ನಡೆಸುತ್ತಿರುವ ಶ್ರಮ ಮತ್ತು ತ್ಯಾಗವು ಯುವ ಪೀಳಿಗೆಗೆ ಪ್ರೇರಣೆಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.