ಕಸ್ತೂರಿ ರಂಗನ್ ವರದಿ ಜಾರಿಗೆ ಮುನ್ನಜನರ ಅಹವಾಲಿಗೆ ಧ್ವನಿಯಾಗಿ : ಪೇಜಾವರ ಶ್ರೀ ಸಲಹೆ

0
30

ಪಶ್ಚಿಮಘಟ್ಟದ ಜನರ ಭಯ, ಗೊಂದಲ ನಿವಾರಿಸಿ: ಅಮಿತ್ ಶಾಗೆ ಪೇಜಾವರ ಶ್ರೀ ಮನವಿ

ಉಡುಪಿ: ಕಸ್ತೂರಿ ರಂಗನ್​ ವರದಿ ಜಾರಿಗೆ ಮುನ್ನ ಆ ಭಾಗದ ಜನರ ಅಹವಾಲು ಸ್ವೀಕರಿಸಬೇಕು. ಪಶ್ಚಿಮಘಟ್ಟದ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರ ಆತಂಕ ಭಯಗೊಂದಲಗಳನ್ನು ನಿವಾಸರಿಸಲು ಆದ್ಯತೆ ನೀಡಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಂದ್ರ ಗೃಹಮಂತ್ರಿ ಅಮಿತ್​ ಶಾ ಅವರಿಗೆ ಲಿಖಿತ ಪ್ರಸ್ತಾವನೆ ಸಲ್ಲಿಸಿದರು.

ನವದೆಹಲಿ ವಸಂತ್​ ಕುಂಜ್​ ಪೇಜಾವರ ಮಠದ ಶಾಖೆ ವೇದವ್ಯಾಸ ಗುರುಕುಲದಲ್ಲಿ ಚಾತುಮಾರ್ಸ್ಯ ವ್ರತ ನಿರತರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಕೇಂದ್ರ ಗೃಹಮಂತ್ರಿ ಅಮಿತ್​ ಶಾ ಸೋಮವಾರ ಭೇಟಿ ಮಾಡಿದರು. ಈ ಬಗ್ಗೆ ಖಂಡಿತ ವಿಚಾರ ಮಾಡುವುದಾಗಿ ಶಾ ತಿಳಿಸಿದರು.

ಗುರುಕುಲದ ವಿದ್ಯಾರ್ಥಿಗಳ ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕೃಷ್ಣದೇವರ ದರ್ಶನ ಪಡೆದು ಪಂಚದೀಪಗಳನ್ನು ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಸಂಸ್ಥಾನದ ಪಟ್ಟದ ದೇವರ ದರ್ಶನ, ಶ್ರೀ ವಿಶ್ವೇಶ ತೀರ್ಥ ಸಂಸ್ಮರಣ ಧ್ಯಾನಮಂದಿರಕ್ಕೆ ತೆರಳಿ ಪಾದುಕಾದರ್ಶನ ಪಡೆದರು. ಬಳಿಕ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಪ್ತ ಸಮಾಲೋಚನೆ ನಡೆಸಿದರು.

ಸ್ವಾಮೀಜಿಯವರು ಸಚಿವರಿಗೆ ಶಾಲು, ಪೇಟ ಹಾರ, ಸ್ಮರಣಿಕೆ ಸಹಿತ ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಸಂಸದರಾದ ಬಾನ್ಸುರಿ ಸ್ವರಾಜ್​ , ರಾಮ ವೀರ್​ ಸಿಂಗ್​ ಬಿದೂರಿ , ಶಾಸಕರಾದ ಅನಿಲ್​ ಶಮಾರ್ ಕೈಲಾಶ್​ ಗೆಹ್ಲೋಟ್​ , ಡಿಡಿಎ ಸದಸ್ಯ ರಾಜೀವ್​ ಬಬ್ಬರ್​, ರಾಕೇಶ್​ ಗೌರ್​, ವಿದ್ವಾನ್​ ಎನ್​.ವಿಠಲ ಭಟ್​ , ಟಿ.ಪಿ ಅನಂತ, ಶ್ರೀಗಳ ಆಪ್ತಕಾರ್ಯದರ್ಶಿ ಕೃಷ್ಣಮೂರ್ತಿ ಭಟ್​, ಅಶ್ವಿನ್​ ಕುಮಾರ್​, ಕೇಂದ್ರೀಯ ಸಂಸತ ವಿವಿ ಉಪಕುಲಪತಿ ಡಾ.ವರಖೇಡಿ ಶ್ರೀನಿವಾಸ ಆಚಾರ್ಯ, ಡಾ. ವಿಠೋಬಾಚಾರ್ಯ, ವಾಸುದೇವ ಭಟ್​ ಪೆರಂಪಳ್ಳಿ ಉಪಸ್ಥಿತರಿದ್ದರು.