ಕೇರಳ ರಾಜ್ಯ ಭಾಷಾ ಮಸೂದೆ ವಿರುದ್ಧ ಉಗ್ರ ಹೋರಾಟಕ್ಕೆ ಎಚ್ಚರಿಕೆ : ವಾಮನ್ ರಾವ್ ಬೇಕಲ್

0
81

ಕಾಸರಗೋಡು : ಕೇರಳ ರಾಜ್ಯದಲ್ಲಿ ಪ್ರಸ್ತಾಪಿತವಾಗಿರುವ ಭಾಷಾ ಮಸೂದೆ ಇಲ್ಲಿನ ಕನ್ನಡಿಗರ ಭಾಷಾ ಸಂಸ್ಕೃತಿ, ಕನ್ನಡದಲ್ಲಿ ಕಲಿಯುವ ಹಾಗೂ ವ್ಯವಹರಿಸುವ ಹಕ್ಕನ್ನು ಕಸಿಯುವ ಪ್ರಯತ್ನವಾಗಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅಗತ್ಯವಿದ್ದರೆ ಉಗ್ರ ಹೋರಾಟಕ್ಕೂ, ಪ್ರಾಣ ತ್ಯಾಗಕ್ಕೂ ಕನ್ನಡಿಗರು ಸಿದ್ಧರಾಗಿದ್ದಾರೆ ಎಂದು ಕನ್ನಡ ಭವನ ಸಂಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಎಚ್ಚರಿಕೆ ನೀಡಿದರು.

ಕೇರಳದಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಕಲಿಯುವಂತೆ ಮಾಡಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುವ ಯಾವುದೇ ಪ್ರಯತ್ನ ಸಲ್ಲದು. ಕನ್ನಡಿಗರು ಶಾಂತಿ ಪ್ರಿಯರು, ಆದರೆ ಹೇಡಿಗಳಲ್ಲ. ನಮ್ಮ ಭಾಷಾ ಸ್ವಾತಂತ್ರ್ಯ ಮತ್ತು ಸಂಸ್ಕೃತಿ ಸ್ವಾತಂತ್ರ್ಯ ನಮ್ಮ ಮೂಲ ಹಕ್ಕು. ಆ ಹಕ್ಕಿನ ಉಳಿವಿಗಾಗಿ ಕನ್ನಡಿಗರು ಯಾವುದೇ ತ್ಯಾಗಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

“ಎಲ್ಲರೂ ಬನ್ನಿ… ಓಡೋಡಿ ಬನ್ನಿ. ಮನೆಗೆ ಬೆಂಕಿ ಬಿದ್ದಿದೆ. ಕಯ್ಯಾರರ ಕರೆಯನ್ನು ಮತ್ತೆ ಸ್ವೀಕರಿಸೋಣ” ಎಂದು ಕರೆ ನೀಡಿದ ವಾಮನ್ ರಾವ್ ಬೇಕಲ್, ಕೇರಳ ರಾಜ್ಯ ಭಾಷಾ ಮಸೂದೆಯ ಪರಿಣಾಮಗಳು ಹಾಗೂ ಅದರಿಂದ ಉಂಟಾಗುವ ಅಪಾಯಗಳ ಕುರಿತು ಚರ್ಚಿಸಲು ಕನ್ನಡಪರ ಸಂಘಟನೆಗಳ ಪ್ರಮುಖ ಮುಖಂಡರ ಸಭೆಯನ್ನು ಕರೆದಿದ್ದಾರೆ.

ಕನ್ನಡಪರ ಸಂಘಟನೆಗಳ ಮಹತ್ವದ ಸಭೆ
ಕನ್ನಡಪರ ಸಂಘಟನೆಗಳ ಪ್ರಮುಖ ಮುಖಂಡರ ಸಭೆ ಜ.12 ರಂದು (ಸೋಮವಾರ) ಸಂಜೆ 5.00 ಗಂಟೆಗೆ ಕಾಸರಗೋಡು ಬೀರಂತಬೈಲಿನಲ್ಲಿರುವ ಕನ್ನಡ ಅಧ್ಯಾಪಕರ ಭವನದಲ್ಲಿ ಜರಗಲಿದೆ. ಈ ಸಭೆಗೆ ಎಲ್ಲ ಕನ್ನಡಪರ ಹೋರಾಟಗಾರರು, ಮುಖಂಡರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಾಮನ್ ರಾವ್ ಬೇಕಲ್
ಸಂಸ್ಥಾಪಕ ಅಧ್ಯಕ್ಷರು, ಕನ್ನಡ ಭವನ

LEAVE A REPLY

Please enter your comment!
Please enter your name here