ಉಡುಪಿ : ದಂತ ವೈದ್ಯರು ರೋಗಿಗಳ ಆರೋಗ್ಯದ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಿದ್ದಾರೆ. ತಾಂತ್ರಿಕ ಹಾಗೂ ವೃತ್ತಿಪರ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಿದರೆ ಸಂಸ್ಥೆಯ ಏಳಿಗೆಗೂ ಸೇವೆಯ ಗುಣಮಟ್ಟಕ್ಕೂ ಉತ್ತೇಜನ ಸಿಗುತ್ತದೆ. ಸಂಸ್ಥೆಯ ಅಭಿವೃದ್ಧಿಗೆ ನಾಯಕತ್ವ ಗುಣ ಅತೀ ಅಗತ್ಯ. ಸಂಘಟನೆಯಲ್ಲಿ ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಮುನ್ನಡೆದಾಗ ಯೋಜನೆ ಸಫಲವಾಗಲಿದೆ. ಎಲ್ಲರ ನಗು, ಸಂತೋಷಕ್ಕೆ ಕಾರಣರಾಗುವ ದಂತ ವೈದ್ಯರ ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಗಳು ನೆರವೇರಲಿ ಎಂದು ಪದಪ್ರದಾನ ಅಧಿಕಾರಿ ದಂತ ವೈದ್ಯ ಡಾ| ವಿಜಯೇಂದ್ರ ರಾವ್ ಹಾರೈಸಿದರು.
ಕಲ್ಸಂಕ ಟೈಮ್ಸ್ ಸ್ಕ್ವೇರ್ ಸಮುಚ್ಚಯದಲ್ಲಿರುವ ಓಷಿಯನ್ ಪರ್ಲ್ ಹೊಟೇಲ್‌ನ ಹಾಲ್‌ನಲ್ಲಿ ರವಿವಾರ ಜರಗಿದ ಭಾರತೀಯ ಡೆಂಟಲ್ ಅಸೋಸಿಯೇಶನ್ (ಐಡಿಎ) ಉಡುಪಿ ಜಿಲ್ಲಾ ಶಾಖೆಯ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು.

ನೂತನ ಅಧ್ಯಕ್ಷ ಡಾ| ಸಯ್ಯದ್ ಮೊಹಮ್ಮದ್ ಫೈಜ್ ಮಾತನಾಡಿ, ಆರೋಗ್ಯ ವಿಚಾರದ ಕುರಿತು ಸಾರ್ವಜನಿಕರೊಂದಿಗೆ ಸಂವಹನ ಮತ್ತು ಜಾಗೃತಿ ಮೂಡಿಸುವುದು, ಪಾನ್ ಗುಟ್ಕಾ, ತಂಬಾಕು, ಮದ್ಯಪಾನದಂತಹ ಮಾದಕ ಪದಾರ್ಥಗಳಿಗೆ ದಾಸರಾಗದಂತೆ ಮಾಹಿತಿ, ಸಲಹೆ ನೀಡುವುದು, ರಸ್ತೆ ನಿಯಮ ಪಾಲಿಸುವ ಬಗ್ಗೆ ಮಾಹಿತಿ, ನಿರಂತರ ವೈದ್ಯಕೀಯ ಶಿಕ್ಷಣ ಇತ್ಯಾದಿ ಕಾರ್ಯಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಹೋಗುವತ್ತ ಪ್ರಯತ್ನಿಸಲಾಗುವುದು. ಸಂಘಟನೆಯ ಬಲವರ್ಧನೆಗೆ ಪೂರ್ವಾಧ್ಯಕ್ಷರು, ಸದಸ್ಯರ ಪೂರ್ಣ ಸಹಕಾರ ಅತ್ಯಗತ್ಯ ಎಂದರು.ಖಜಾಂಚಿ ಡಾ| ತೇಜಕಿರಣ್ ಶೆಟ್ಟಿ, ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ಡಾ| ಶಿಹಾನ್ ಡಿ’ಸೋಜಾ ನಿರೂಪಿಸಿದರು. ಕಾರ್ಯದರ್ಶಿ ಡಾ| ಗೌತಮ್ ರಾವ್ ವಂದಿಸಿದರು. ಉಡುಪಿ ಜಿಲ್ಲಾ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ದಂತ ವೈದ್ಯರು ಉಪಸ್ಥರಿದ್ದರು , ದಂತ ವೈದ್ಯರಿಂದ ಮನೋರಂಜನಾ ಸ್ಪರ್ಧೆ ಕೂಟ “ಡೆಂಟೋಫೆಸ್ಟ್-2026” ನಡೆಯಿತು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

