ಬ್ರಿಟನ್ : ಬೆಳಿಗ್ಗೆ ಎದ್ದಾಗ ತನ್ನ ದೇಹ ಸಂಪೂರ್ಣವಾಗಿ ನೀಲಿ ಬಣ್ಣಕ್ಕೆ ತಿರುಗಿರುವುದನ್ನು ಕಂಡ ವ್ಯಕ್ತಿಯೊಬ್ಬ ಗಾಬರಿಗೊಂಡು ಆಸ್ಪತ್ರೆಗೆ ಧಾವಿಸಿದ ಘಟನೆ ಅಮೆರಿಕಾದಲ್ಲಿ ನಡೆದಿದೆ. ನಂತರ ಇದರ ಹಿಂದೆ ಇದ್ದ ನಿಜವಾದ ಕಾರಣ ತಿಳಿದು ವೈದ್ಯರು ಸಹ ನಗೆಗಡಲಲ್ಲಿ ತೇಲಿದರು.
42 ವರ್ಷದ ಟಾಮಿ ಲಿಂಚ್ ಎಂಬ ವ್ಯಕ್ತಿ ಬೆಳಿಗ್ಗೆ ಎದ್ದಾಗ ತನ್ನ ಚರ್ಮ ಸಂಪೂರ್ಣವಾಗಿ ನೀಲಿ ಬಣ್ಣಕ್ಕೆ ತಿರುಗಿರುವುದನ್ನು ಗಮನಿಸಿದ್ದಾನೆ. ದೇಹದಲ್ಲಿ ಅಸ್ವಸ್ಥತೆ ಮತ್ತು ಬಣ್ಣ ಬದಲಾವಣೆ ಕಂಡು ಆತ ಭಯಗೊಂಡು ತಕ್ಷಣ ಸ್ನೇಹಿತನ ಸಹಾಯದಿಂದ ಆಸ್ಪತ್ರೆಗೆ ಹೋಗಿದ್ದಾನೆ.
ಆತನ ಸ್ಥಿತಿಯನ್ನು ಕಂಡ ವೈದ್ಯರು ಆರಂಭದಲ್ಲಿ ರಕ್ತದಲ್ಲಿ ಆಮ್ಲಜನಕದ ಕೊರತೆಯಿರಬಹುದು ಎಂದು ಶಂಕಿಸಿ ತುರ್ತು ಚಿಕಿತ್ಸೆಗೆ ಸಿದ್ಧರಾದರು. ಆದರೆ ಪರೀಕ್ಷೆಯ ವೇಳೆ ಅಚ್ಚರಿಯ ಸಂಗತಿ ಬಹಿರಂಗವಾಯಿತು. ವೈದ್ಯರು ಸ್ಪಿರಿಟ್ ಬಳಸಿ ಆತನ ಕೈಯನ್ನು ಒರೆಸಿದಾಗ ಹತ್ತಿ ನೀಲಿ ಬಣ್ಣಕ್ಕೆ ತಿರುಗಿತು. ಇದರಿಂದ ದೇಹದ ಒಳಗಿನ ಸಮಸ್ಯೆಯಲ್ಲ, ಹೊರಗಿನ ಬಣ್ಣವೇ ಅಂಟಿಕೊಂಡಿದೆ ಎಂಬುದು ತಿಳಿಯಿತು.
ನಂತರ ವಿಚಾರಿಸಿದಾಗ ಟಾಮಿ ಇತ್ತೀಚೆಗೆ ಹೊಸದಾಗಿ ಖರೀದಿಸಿದ್ದ ಗಾಢ ನೀಲಿ ಬಣ್ಣದ ಬೆಡ್‌ಶೀಟ್‌ಗಳನ್ನು ತೊಳೆಯದೇ ಬಳಸಿದ್ದಾನೆ ಎಂಬುದು ಗೊತ್ತಾಯಿತು. ಎರಡು ದಿನಗಳ ಕಾಲ ಅದೇ ಹಾಸಿಗೆಯ ಮೇಲೆ ಮಲಗಿದ್ದರಿಂದ ಅದರ ಬಣ್ಣ ದೇಹಕ್ಕೆ ಅಂಟಿಕೊಂಡಿತ್ತು.
ಈ ಘಟನೆ ಬಗ್ಗೆ ಟಾಮಿ ಹಾಸ್ಯವಾಗಿ “ನಾನು Avatar ಚಿತ್ರದ ಪಾತ್ರದಂತೆ ಕಾಣುತ್ತಿದ್ದೆ” ಎಂದು ಹೇಳಿಕೊಂಡಿದ್ದಾನೆ.

