ಕಾಡಾನೆ ‘ವಿಸಿಟ್’ ಜನರಲ್ಲಿ ಹೆಚ್ಚಿದ ಭೀತಿ

0
59

ಬೆಳ್ತಂಗಡಿ : ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚುತ್ತಿರುವ ನಡುವೆಯೇ ಪುದುವೆಟ್ಟು ಗ್ರಾಮದ ಮಡ್ಯಾ ಪರಿಸರದಲ್ಲಿ ಒಂಟಿ ಕಾಡಾನೆಯೊಂದು ಕಳೆದ ರಾತ್ರಿಯಿಂದ ಬೀಡುಬಿಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕಾಡಾನೆಯು ಸೋಮವಾರ ರಾತ್ರಿ ಮಡ್ಯಾ ಪರಿಸರಕ್ಕೆ ಆಗಮಿಸಿದ್ದು, ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಯವರೆಗೂ ಆ ಪ್ರದೇಶದಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ. ಬಳಿಕ ಕಾಡಾನೆ ಎಲ್ಲಿಗೆ ತೆರಳಿದೆ ಎಂಬುದು ಸ್ಪಷ್ಟವಾಗಿಲ್ಲ.

ಆದರೆ ಕಾಡಾನೆ ಅದೇ ಪರಿಸರದಲ್ಲಿ ಅಡಗಿಕೊಂಡಿರುವ ಸಾಧ್ಯತೆಯಿದೆ ಎಂಬ ಶಂಕೆ ಗ್ರಾಮಸ್ಥರಲ್ಲಿ ಮೂಡಿದೆ. ಕಾಡಾನೆ ಸಂಚಾರದಿಂದ ಕೃಷಿ ಚಟುವಟಿಕೆಗಳಿಗೆ ತೆರಳುವವರು ಹಾಗೂ ಸ್ಥಳೀಯ ನಿವಾಸಿಗಳು ಎಚ್ಚರಿಕೆಯಿಂದ ಇರುವಂತಾಗಿದೆ.

ಕಾಡಾನೆಗಳ ನಿರಂತರ ಸಂಚಾರದಿಂದ ಆತಂಕಕ್ಕೊಳಗಾಗಿರುವ ಗ್ರಾಮಸ್ಥರು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.