ಕುಂದಾಪುರ : ಮಾನವೀಯತೆಯನ್ನೇ ಮರೆತು ಪರಿಶಿಷ್ಟ ಪಂಗಡದ (ಕೊರಗ ಸಮುದಾಯ) ವ್ಯಕ್ತಿಯೊಬ್ಬರನ್ನು ಸುಮಾರು ಮೂರು ದಶಕಗಳ ಕಾಲ ಜೀತದಾಳಾಗಿ ಇರಿಸಿಕೊಂಡಿದ್ದ ಆರೋಪದ ಮೇಲೆ ಕನ್ಯಾನ ಗ್ರಾಮದ ಮಹಿಳೆಯೊಬ್ಬರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕನ್ಯಾನ ಗ್ರಾಮದ ಕಬ್ಬೈಲು ಉಳಿಯಾರ ಮನೆಯ ನಾಗ (65) ಎಂಬುವವರು ಕಳೆದ 30 ವರ್ಷಗಳಿಂದ ಸುಬ್ಬಣ್ಣ ಶೆಟ್ಟಿ ಎಂಬುವವರ ಮನೆಯಲ್ಲಿ ಕೆಲಸಕ್ಕಿದ್ದು, ಸುಬ್ಬಣ್ಣ ಶೆಟ್ಟಿ ನಿಧನದ ನಂತರ, ಅವರ ಮಗಳು ರಜನಿ ಶೆಟ್ಟಿ ಮತ್ತು ಅಳಿಯ ಕರುಣಾಕರ ಶೆಟ್ಟಿ ಅವರು ನಾಗ ಅವರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕೊಟ್ಟಿಗೆಯಲ್ಲೇ ವಾಸ ಪರಿಶಿಷ್ಟ ಪಂಗಡದ (ಕೊರಗ ಸಮುದಾಯ) ನಾಗ ಅವರಿಗೆ ಸರಿಯಾದ ಕೂಲಿ ನೀಡದೆ, ದನ-ಎಮ್ಮೆ ಮೇಯಿಸುವುದು, ಸಗಣಿ ಎತ್ತುವುದು ಮತ್ತು ಶೌಚಾಲಯ ಸ್ವಚ್ಛಗೊಳಿಸುವ ಕೆಲಸ ನೀಡಲಾಗುತ್ತಿತ್ತು.
ಅವರಿಗೆ ಉಳಿದುಕೊಳ್ಳಲು ಕನಿಷ್ಠ ಸೌಕರ್ಯವನ್ನೂ ನೀಡದೆ, ದನದ ಕೊಟ್ಟಿಗೆಯಲ್ಲೇ ಮಲಗುವಂತೆ ಒತ್ತಾಯಿಸಲಾಗಿತ್ತು. ಅವರ ಬಟ್ಟೆ ಹಾಗೂ ತಟ್ಟೆಗಳನ್ನು ಕೊಟ್ಟಿಗೆಯಲ್ಲೇ ಇಡಬೇಕಿತ್ತು. ಊಟವನ್ನು ಸಹ ಬಾಳೆ ಎಲೆಯಲ್ಲಿ ಕೊಟ್ಟಿಗೆಯಲ್ಲೇ ನೀಡಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಾಗ ಅವರಿಗೆ ಮನೆಯಿಂದ ಹೊರಗೆ ಹೋಗಲು ಬಿಡದೆ, ಬಲವಂತವಾಗಿ ದುಡಿಸಿಕೊಂಡು ದಲಿತ ದೌರ್ಜನ್ಯ ಎಸಗಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಆರೋಪಿ ರಜನಿ ಶೆಟ್ಟಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಸದ್ಯ ರಜನಿ ಶೆಟ್ಟಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿದ್ದಾರೆ.

