ಹಿರಿಯ ಯಕ್ಷಗಾನ ಕಲಾವಿದ, ರಂಗಮನೆಯ ಸುಜನಾ ಸುಳ್ಯ ನಿಧನಕ್ಕೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ

0
105

ತೆಂಕು ತಿಟ್ಟನ ಶ್ರೇಷ್ಠ ಯಕ್ಷಗಾನ ಕಲಾವಿದ ಸುಳ್ಯದ ‘ರಂಗಮನೆ’ಯ ಯಜಮಾನ ಸುಜನಾ ಸುಳ್ಯ (89) ವಯೊ ಸಹಜ ಅನಾರೋಗ್ಯದಿಂದ ಶುಕ್ರವಾರ ಮುಂಜಾನೆ
ದೈವಾಧೀನರಾದರು. ಅವರ ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿಯ ಸರ್ವ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸುಜನಾ ಸುಳ್ಯ ಎಂದೇ ಪ್ರಸಿದ್ಧರಾಗಿದ್ದ ಸುಳ್ಯ ಜಯರಾಮ ನಾವೂರು ಅವರು ಯಕ್ಷರಂಗದ ಬಹುಮುಖ ಪ್ರತಿಭೆಯ ಕಲಾವಿದರಾಗಿದ್ದರು.

ಸುಳ್ಯದ ಪ್ರಸಿದ್ಧ ನಾವೂರು ಮನೆತನದಲ್ಲಿ ಜನಿಸಿದ ಸುಜನಾ ಸುಳ್ಯ (ಎಸ್‌.ಎನ್‌.ಜಯರಾಮ) ಅವರು ನಾಟಕ ನಟರಾಗಿ ವೃತ್ತಿ ಆರಂಭಿಸಿದರು. ಮಾವ ಕಾವು ಶ್ರೀನಿವಾಸ ರಾಯರ ಪ್ರೇರಣೆಯಿಂದ ಯಕ್ಷಗಾನ ಕಲಾವಿದರಾಗಿ ಬಳ್ಳಂಬೆಟ್ಟು, ಧರ್ಮಸ್ಥಳ, ಇರಾಸೋಮನಾಥೇಶ್ವರ, ಕುದ್ರೋಳಿ, ಕೂಡ್ಲು, ಆದಿಸುಬ್ರಹ್ಮಣ್ಯ, ಸುಂಕದಕಟ್ಟೆ, ಕಟೀಲು ಮೇಳಗಳಲ್ಲಿ ಮುವತ್ತಾರು ವರ್ಷ ಕಲಾಸೇವೆ ಗೈದಿದ್ದರು. ಹಾಸ್ಯ ಪಾತ್ರಗಳಲ್ಲಿ ವಿಶೇಷ ಸಿದ್ಧಿ ಪ್ರಸಿದ್ಧಿ ಪಡೆದಿದ್ದ ಇವರು ಎಲ್ಲಾ ರೀತಿಯ ಸ್ತ್ರೀ, ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಹಿಮ್ಮೇಳದ ಎಲ್ಲಾ ವಿಭಾಗಗಳಲ್ಲೂ ಪರಿಣತರಾಗಿದ್ದು, ತಾಳಮದ್ದಲೆ ಅರ್ಥಧಾರಿಯಾಗಿ, ಪ್ರಸಾಧನ ತಜ್ಞರಾಗಿ ಯಕ್ಷಗಾನದ ಸರ್ವಾಂಗವನ್ನೂ ಬಲ್ಲ ಕಲಾವಿದರಾಗಿದ್ದರು. ಯಕ್ಷಗಾನ ಗುರುಗಳಾಗಿ ಸುಳ್ಯದಲ್ಲಿ ‘ವಿದೇಯದೇವಿ ನಾಟ್ಯಕಲಾ ಸಂಘ’ ಸ್ಥಾಪಿಸಿ, ರಂಗ ಮನೆಯ ‘ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ’ದ ಮೂಲಕ ಹಲವರ ಯಕ್ಷಗಾನ ಕಲಿಕೆಗೆ ಪ್ರೇರಕ ಶಕ್ತಿಯಾಗಿದ್ದರು.

ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಿದ್ದ ಅವರು ಸುಳ್ಯ ತಾಲೂಕಿನ ‘ರಂಗಮನೆ’ ಎಂಬ ಕಲಾ ಕೇಂದ್ರದ ರೂವಾರಿ, ರಂಗ ಕಲಾವಿದ, ಮತ್ತು ರಂಗನಿರ್ದೇಶಕ ಜೀವನ್ ರಾಮ್ ಸುಳ್ಯ ಅವರ ತಂದೆ. ರಂಗಮನೆಯು ಯಕ್ಷಗಾನ ಮತ್ತು ರಂಗಭೂಮಿ ಸೇರಿದಂತೆ ವಿವಿಧ ಸಾಂಸ್ಕ ತಿಕ ಚಟುವಟಿಕೆಗಳಲ್ಲಿಯೂ ಸುಜನಾ ಸುಳ್ಯ ತೊಡಗಿಸಿಕೊಂಡಿದ್ದರು. ಸುಜನಾ ಸುಳ್ಯ ಅವರು ಪುತ್ರ ರಂಗಕರ್ಮಿ ಜೀವನರಾಂ ಸುಳ್ಯ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಸುಜನಾ ಸುಳ್ಯ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅಕಾಡೆಮಿ ಸರ್ವ ಸದಸ್ಯರು ಸಂತಾಪ ಸೂಚಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here