ಉಪ್ಪಿನಂಗಡಿ : ಇಳಂತಿಲ ಗ್ರಾಮದ ಕಡವಿನಬಾಗಿಲು ಎಂಬಲ್ಲಿ ಮಾದಕ ದ್ರವ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಆರೋಪದ ಮೇಲೆ 24 ವರ್ಷದ ಯುವಕನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಡವಿನಬಾಗಿಲು ನಿವಾಸಿ ಝಿಯಾದ್ (24) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ನ್ಯಾಯಾಲಯದ ವಾರೆಂಟ್ ಆದೇಶದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಝಿಯಾದ್ ಮಾದಕ ದ್ರವ್ಯ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ಬಳಿಕ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ಸುಮಾರು ಒಂದು ವಾರದ ಹಿಂದೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನೌಶಾದ್ ಎಂಬಾತನಿಂದ ₹7,500 ಮೌಲ್ಯದ 15 ಗ್ರಾಂ ಗಾಂಜಾವನ್ನು ಖರೀದಿಸಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ತಪಾಸಣೆ ನಡೆಸಿದಾಗ ಆತನ ಬಳಿ 10.33 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಗಾಂಜಾ ಖರೀದಿ, ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಝಿಯಾದ್ ಮತ್ತು ನೌಶಾದ್ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

