ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನರು ಸಂಕಲ್ಪ ಮಾಡಲಿ: ಶಾಸಕ ಸುನಿಲ್ ಕುಮಾರ್

0
6

ಮೂಡುಬಿದಿರೆ ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಮೂಡುಬಿದಿರೆ: ಶ್ರೀ ಮಹಾವೀರ ಪದವಿಪೂರ್ವ ಕಾಲೇಜು, ಮೂಡುಬಿದಿರೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ 2026-27ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 10ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರಿನ ವಿದ್ಯಾರ್ಧಕ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರು, “‘ನಶಾಮುಕ್ತ ಭಾರತ ಅಭಿಯಾನ’ದ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಈ ಬಾರಿಯ ಶಿಬಿರದಲ್ಲಿ ಯುವಜನರು ವ್ಯಸನಗಳ ಆಕರ್ಷಣೆಗೆ ಒಳಗಾಗದೆ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು. ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವುದರ ಜೊತೆಗೆ, ಭವಿಷ್ಯದಲ್ಲಿ ಯಶಸ್ವಿ ನಾಯಕರಾಗಿ ಬೆಳೆಯಲು ಪೂರಕ ವಾತಾವರಣವನ್ನು ಕಲ್ಪಿಸುತ್ತವೆ” ಎಂದು ಹೇಳಿದರು.

ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾಲೇಜಿನ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿ ಡಾ. ರಾಧಾಕೃಷ್ಣ ಅವರು ಮಾತನಾಡಿ, ವಾರ್ಷಿಕ ವಿಶೇಷ ಶಿಬಿರವು ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ ಮತ್ತು ಸಹಬಾಳ್ವೆಯ ಗುಣಗಳನ್ನು ಬೆಳೆಸುವುದರೊಂದಿಗೆ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಿ ಎಂದು ಹಾರೈಸಿದರು.

ಶ್ರೀ ಮಹಾವೀರ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಪ್ರೇಮಚಂದ್ರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರಾರ್ಥಿಗಳು ಏಳು ದಿನಗಳ ಶಿಬಿರದಲ್ಲಿ ಕಲಿಯುವ ಮೌಲ್ಯಯುತ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಶಿಬಿರದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆ. ವಿಜಯಲಕ್ಷ್ಮಿ ಅವರು ಶಿಬಿರ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮಹಾವೀರ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಜಯಪ್ರಕಾಶ್ ಪಡಿವಾಳ್, ವಿದ್ಯಾರ್ಧಕ ಪದವಿಪೂರ್ವ ಕಾಲೇಜು ಮುಂಡ್ಕೂರಿನ ಕೋಶಾಧಿಕಾರಿ ಅರುಣ್ ರಾವ್, ಹಿರಿಯ ಉಪನ್ಯಾಸಕ ಪ್ರಕಾಶ್ ನಾಯಕ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಶೆಟ್ಟಿ ಮತ್ತು ಭಾಸ್ಕರ್ ಶೆಟ್ಟಿ, ಮುಂಡ್ಕೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ದೇವಪ್ಪ ಸಪಳಿಗ, ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಎನ್‌ಎಸ್‌ಎಸ್ ಅಧಿಕಾರಿ ಚಿತ್ರಲೇಖ, ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಎನ್‌ಎಸ್‌ಎಸ್ ಘಟಕದ ನಾಯಕ ಹಾಸಿತ್ ಚೌಧರಿ ಮತ್ತು ನಾಯಕಿ ಮೋನಿಕಾ ಉಪಸ್ಥಿತರಿದ್ದರು.

ಸಮಾಜಶಾಸ್ತ್ರ ಉಪನ್ಯಾಸಕಿ ಸುಜಾತ ಕುಮಾರಿ ಬಿ. ಕಾರ್ಯಕ್ರಮ ನಿರೂಪಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಚಿತ್ರಲೇಖ ಸ್ವಾಗತಿಸಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಅಶ್ವಿತಾ ಆಚಾರ್ಯ ವಂದಿಸಿದರು.

ಅಕ್ಟೋಬರ್ 16ರವರೆಗೆ ಶಿಬಿರ

‘ನಶಾಮುಕ್ತ ಭಾರತ ಅಭಿಯಾನ’ದ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಈ ವಾರ್ಷಿಕ ವಿಶೇಷ ಶಿಬಿರವು ಅಕ್ಟೋಬರ್ 10ರಿಂದ 16ರವರೆಗೆ ಏಳು ದಿನಗಳ ಕಾಲ ಮುಂಡ್ಕೂರಿನ ವಿದ್ಯಾರ್ಧಕ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಶಿಬಿರದ ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸ್ವಾವಲಂಬನೆ, ಸಹಬಾಳ್ವೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ.