ನವದೆಹಲಿ: ಪಾಕಿಸ್ತಾನದ ಗುಪ್ತಚರ ಕಾರ್ಯಕರ್ತರೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಹರ್ಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಮತ್ತು ಇತರ ಆರು ಜನರನ್ನು ಬಂಧಿಸಲಾಗಿದೆ. ಕಮಿಷನ್ ಏಜೆಂಟ್‌ಗಳ ಮೂಲಕ ವೀಸಾ ಪಡೆದ ನಂತರ ಜ್ಯೋತಿ ಮಲ್ಹೋತ್ರಾ 2023ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ನಂತರ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನ ಸಿಬ್ಬಂದಿ ಸದಸ್ಯರಾದ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಪರೇಷನ್ ಸಿಂಧೂರ್ ನಡೆದ ಕೆಲವು ದಿನಗಳ ನಂತರ, ಪಾಕಿಸ್ತಾನದ ಕಾರ್ಯಕರ್ತರಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಭಾರತೀಯ ಅಧಿಕಾರಿಗಳು ಹರಿಯಾಣ ಮೂಲದ ಟ್ರಾವೆಲ್ ಬ್ಲಾಗರ್ ಜ್ಯೋತಿ ಮಲ್ಹೋತ್ರಾ ಸೇರಿದಂತೆ 6 ಭಾರತೀಯ ಪ್ರಜೆಗಳನ್ನು ಬಂಧಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಈ ಪ್ರಮುಖ ಕಾರ್ಯಕರ್ತರು ಏಜೆಂಟ್‌ಗಳು, ಹಣಕಾಸು ಮಾರ್ಗದರ್ಶಕರು ಮತ್ತು ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಹರಿಯಾಣ ಮತ್ತು ಪಂಜಾಬ್‌ನಲ್ಲಿ ನೆಟ್‌ವರ್ಕ್‌ಗಳನ್ನು ಹೊಂದಿದ್ದರು ಎನ್ನಲಾಗಿದೆ.
“ಟ್ರಾವೆಲ್ ವಿತ್ ಜೋ” ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಆರೋಪಿ ಜ್ಯೋತಿ, 2023ರಲ್ಲಿ ಕಮಿಷನ್ ಏಜೆಂಟ್‌ಗಳ ಮೂಲಕ ವೀಸಾ ಪಡೆದ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ತನ್ನ ಪ್ರವಾಸದ ಸಮಯದಲ್ಲಿ ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನ ಸಿಬ್ಬಂದಿ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಜೊತೆಯೂ ಅವರು ನಿಕಟ ಸಂಬಂಧವನ್ನು ಬೆಳೆಸಿಕೊಂಡರು. ನಂತರ ಐಎಸ್ಐ ಏಜೆಂಟ್ ಜೊತೆಗೂ ಆಕೆ ಸಂಪರ್ಕ ಹೊಂದಿದ್ದಳು. ಸರ್ಕಾರದಿಂದ ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲ್ಪಟ್ಟ ಡ್ಯಾನಿಶ್ ಈ ವರ್ಷ ಮೇ 13ರಂದು ಭಾರತದಿಂದ ಹೊರಹಾಕಲ್ಪಟ್ಟರು. ಆ ನಂತರ ಅವರು ಜ್ಯೋತಿ ಅವರನ್ನು ಅನೇಕ ಪಾಕಿಸ್ತಾನಿ ಗುಪ್ತಚರ ಅಧಿಕಾರಿಗಳಿಗೆ ಪರಿಚಯಿಸಿದರು ಎಂದು ಭಾರತೀಯ ಅಧಿಕಾರಿಗಳು ಶಂಕಿಸಿದ್ದಾರೆ.
ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಎನ್‌ಕ್ರಿಪ್ಟ್ ಮಾಡಲಾದ ಪ್ಲಾಟ್‌ಫಾರ್ಮ್‌ಗಳ ಮೂಲಕ “ಜಟ್ ರಾಂಧವ” ಎಂದು ಅವರ ಸಂಖ್ಯೆಯನ್ನು ಉಳಿಸಿಕೊಂಡಿದ್ದ ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಐಎಸ್ಐ ಕಾರ್ಯಕರ್ತರೊಂದಿಗೆ ಜ್ಯೋತಿ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಅವರ ಜೊತೆ ಜ್ಯೋತಿ ಭಾರತೀಯ ಸ್ಥಳಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ದಾಳಿಗಳು ನಡೆಯುವಾಗ ಕಾಶ್ಮೀರಕ್ಕೂ ತೆರಳಿದ್ದ ಜ್ಯೋತಿ ಅಲ್ಲಿನ ಸೂಕ್ಷ್ಮ ಸ್ಥಳಗಳಲ್ಲಿ ರೀಲ್ಸ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು. ಈ ಮೂಲಕ ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡಿದ್ದರು ಎನ್ನಲಾಗಿದೆ.