ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ “ಯುವ ವೃಕ್ಷೋತ್ಸವ – 2026” ಕಾರ್ಯಕ್ರಮದ ಅಂಗವಾಗಿ ಇಡ್ಕಿದು ಗ್ರಾಮ ಪಂಚಾಯಿತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರು, ಸರಕಾರಿ ಪ್ರೌಢಶಾಲೆ ಸೂರ್ಯ ಹಾಗೂ ಮಾಣಿ ಶ್ರೀ ಉಳ್ಳಾಲ್ತಿ ಧರ್ಮಚಾವಡಿಯಲ್ಲಿ ವೃಕ್ಷಾರೋಪಣ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಇಡ್ಕಿದು ಗ್ರಾಮ ಪಂಚಾಯಿತಿಯಲ್ಲಿ ಬಂಟ್ವಾಳ ತಾಲೂಕಿನ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿಸೋಜ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಿದರು.
ನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರು, ಶೇರಾ ಶಾಲೆ,ಅಂಗನವಾಡಿ ಶೇರಾ ಹಾಗೂ ಪ್ರೌಢಶಾಲೆ ಸೂರ್ಯದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ವೃಕ್ಷೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಸಂಜೆಯ ವೇಳೆಯಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನ ಧರ್ಮಚಾವಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತು ಅವರ ನೇತೃತ್ವದಲ್ಲಿ ವೃಕ್ಷಾರೋಪಣ ನೆರವೇರಿತು. ಸಮಾಜಮುಖಿ ಕಾರ್ಯಗಳಿಗೆ ಸದಾ ಆಶೀರ್ವಾದ ಹಾಗೂ ಪ್ರೇರಣೆಯಾಗಿರುವ ಉಳ್ಳಾಲ್ತಿ ಅಮ್ಮನ ಸನ್ನಿಧಿಯಲ್ಲಿ ನೆಡಲಾದ ಗಿಡವು ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆದು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಿ ಎಂಬ ಆಶಯ ವ್ಯಕ್ತವಾಯಿತು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಗಣೇಶ್ ಸಾಯಿ ಕೊಡಾಜೆ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು.
“ಒಂದು ಗಿಡದ ನೆಡುವಿಕೆ ಕೇವಲ ಪರಿಸರ ರಕ್ಷಣೆಯಲ್ಲ; ಮುಂದಿನ ಪೀಳಿಗೆಗೆ ನೀಡುವ ಹಸಿರು ಪರಂಪರೆಯಾಗಿದೆ.”

