‘ಬಿನ್ನವತ್ತಳೆ’ ಪುನರ್ ಮುದ್ರಣಕ್ಕೆ ₹10 ಲಕ್ಷ ವೆಚ್ಚ; ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ ಸ್ಥಾಪನೆಗೆ ಯೋಜನೆ

0
15

ಕಾಸರಗೋಡು: ರಾಮಕ್ಷತ್ರಿಯ ಸಮಾಜದ ಸಾಹಿತ್ಯ, ಸಂಸ್ಕೃತಿ, ಇತಿಹಾಸ ಹಾಗೂ ಪರಂಪರೆಯನ್ನು ದಾಖಲಿಸುವ ಮಹತ್ವದ ಪ್ರಯತ್ನವಾಗಿ ‘ಬಿನ್ನವತ್ತಳೆ’ ಕೃತಿಯ ಪರಿಸ್ಕೃತ ಆವೃತ್ತಿ ಹಾಗೂ ‘ರಾಮಕ್ಷತ್ರಿಯ ಕುಟುಂಬ ದೇವಸ್ಥಾನ, ಕುಲದೇವರು ಮತ್ತು ಸಂಘಟನೆಗಳ ವಿಳಾಸದ ಡೈರೆಕ್ಟರಿ–2026’ ಪುನರ್ ಮುದ್ರಣಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಪ್ರಕಟಣಾ ಯೋಜನೆಗೆ ಸುಮಾರು ₹10 ಲಕ್ಷ ವೆಚ್ಚವಾಗಲಿದ್ದು, ಪ್ರಕಟಣೆಯಿಂದ ಉಳಿಕೆಯಾಗುವ ಹಣವನ್ನು ‘ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ’ ಸ್ಥಾಪನೆಗೆ ಬಳಸಲು ಉದ್ದೇಶಿಸಲಾಗಿದೆ.

ಶಿವರಾಮ ಕಾಸರಗೋಡು ಅವರ ಸಂಪಾದಕತ್ವದಲ್ಲಿ ‘ಬಿನ್ನವತ್ತಳೆ’ ಕೃತಿಯು 1997ರ ನವೆಂಬರ್ 9ರಂದು ಮೊದಲ ಬಾರಿಗೆ ಪ್ರಕಟಗೊಂಡಿತ್ತು. ರಾಮಕ್ಷತ್ರಿಯ ಸಮಾಜದ ಸಾಹಿತ್ಯ, ಸಾಂಸ್ಕೃತಿಕ ಹಿನ್ನೆಲೆ ಹಾಗೂ ಚಾರಿತ್ರಿಕ ವಿಚಾರಗಳಿಗೆ ಸಂಬಂಧಿಸಿದ ಸರಕಾರಿ ದಾಖಲೆಗಳು, ಸಂಶೋಧನಾ ಲೇಖನಗಳು, ಜನಾಂಗೀಯ ಅಧ್ಯಯನ ಬರಹಗಳು ಸೇರಿದಂತೆ 1997ರವರೆಗೆ ಪ್ರಕಟಗೊಂಡ ವಿವಿಧ ಕೃತಿಗಳ ಮಾಹಿತಿಯನ್ನು ಈ ಕೃತಿಯಲ್ಲಿ ಸಮಗ್ರವಾಗಿ ದಾಖಲಿಸಲಾಗಿತ್ತು. ಇದೀಗ ಅದನ್ನು ಪರಿಷ್ಕರಿಸಿ ಹೊಸ ಆವೃತ್ತಿಯಾಗಿ ಪ್ರಕಟಿಸಲು ಮುಂದಾಗಲಾಗಿದೆ.

ಇದರೊಂದಿಗೆ ರಾಮಕ್ಷತ್ರಿಯ ಕುಟುಂಬ ದೇವಸ್ಥಾನಗಳು, ಕುಲದೇವರು ಹಾಗೂ ವಿವಿಧ ಸಂಘಟನೆಗಳ ಸಮಗ್ರ ಮಾಹಿತಿಯನ್ನು ಒಳಗೊಂಡ ಡೈರೆಕ್ಟರಿಯ 4ನೇ ಆವೃತ್ತಿಯನ್ನೂ ಪ್ರಕಟಿಸಲಾಗುತ್ತಿದೆ. ಶಿವರಾಮ ಕಾಸರಗೋಡು ಅವರ ಸಂಪಾದಕತ್ವದಲ್ಲಿ ಈ ಡೈರೆಕ್ಟರಿಯ ಮೊದಲ ಮೂರು ಆವೃತ್ತಿಗಳು 1997, 1998 ಮತ್ತು 2004ರಲ್ಲಿ ಪ್ರಕಟಗೊಂಡಿದ್ದವು. ಇದೀಗ ‘ಡೈರೆಕ್ಟರಿ–2026’ ಮೂಲಕ ದೇಶ-ವಿದೇಶ, ವಿವಿಧ ರಾಜ್ಯಗಳು, ಜಿಲ್ಲೆ, ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಟುಂಬ ದೇವಸ್ಥಾನಗಳು, ಕುಲದೇವರು ಮತ್ತು ಸಂಘಟನೆಗಳ ಮಾಹಿತಿಯನ್ನು ಒಂದೆಡೆ ದಾಖಲಿಸಲು ಉದ್ದೇಶಿಸಲಾಗಿದೆ.

ಸಮಾಜದ ಒಗ್ಗಟ್ಟು, ಐಕ್ಯತೆ ಹಾಗೂ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಕುಟುಂಬ ದೇವಸ್ಥಾನಗಳ ಮೊಕ್ತೇಸರರು, ಧರ್ಮದರ್ಶಿಗಳು, ಆಡಳಿತದಾರರು, ಕುಲದೇವರ ಮನೆಗಳ ಮುಖ್ಯಸ್ಥರು ಹಾಗೂ ಸಂಘಟನೆಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಾಟ್ಸ್‌ಆ್ಯಪ್ ಮತ್ತು ಇ-ಮೇಲ್ ಸೇರಿದಂತೆ ಅಗತ್ಯ ಸಂಪರ್ಕ ಮಾಹಿತಿಯನ್ನು ಡೈರೆಕ್ಟರಿಯಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ.

ಇತಿಹಾಸ ಮ್ಯೂಸಿಯಂ ಸ್ಥಾಪನೆಗೆ ಯೋಜನೆ

ರಾಮಕ್ಷತ್ರಿಯ ಸಮಾಜದ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ದಾಖಲೆಗಳು, ಹಳೆಯ ಮುದ್ರಣ ಕೃತಿಗಳು, ಸ್ಮರಣ ಸಂಚಿಕೆಗಳು, ಕೃತಿ ಸಂಪುಟಗಳು ಹಾಗೂ ವಿವಿಧ ಲೇಖಕರು ಮತ್ತು ಬರಹಗಾರರು ಪ್ರಕಟಿಸಿರುವ ಕೃತಿಗಳನ್ನು ಸಂಗ್ರಹಿಸಿ ಸಂರಕ್ಷಿಸುವ ಉದ್ದೇಶದಿಂದ ‘ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ’ ಸ್ಥಾಪಿಸಲು ಯೋಜಿಸಲಾಗಿದೆ.

ಹಿರಿಯ ತಲೆಮಾರಿನ ಮನೆಗಳಲ್ಲಿ ಉಳಿದಿರುವ ರಾಮಕ್ಷತ್ರಿಯ ಸಮಾಜದ ಸಂಸ್ಕೃತಿ, ಸಂಪ್ರದಾಯಗಳಿಗೆ ಸಂಬಂಧಿಸಿದ ಹಾಡುಗಳು, ಹಳೆಯ ವಸ್ತುಗಳು ಹಾಗೂ ಪರಂಪರೆಯ ಕುರುಹುಗಳನ್ನು ಸಂಗ್ರಹಿಸಿ ಮ್ಯೂಸಿಯಂನಲ್ಲಿ ಸಂರಕ್ಷಿಸುವ ಉದ್ದೇಶವಿದೆ. ಸಂಗ್ರಹಿಸಲಾಗುವ ಪ್ರಮುಖ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಯೋಜನೆಯೂ ಇದೆ.

ಮ್ಯೂಸಿಯಂ ನಿರ್ಮಾಣ ಸೇರಿದಂತೆ ಈ ಯೋಜನೆಗಳಿಗೆ ಹೆಚ್ಚಿನ ಪ್ರಮಾಣದ ಆರ್ಥಿಕ ಸಂಪನ್ಮೂಲದ ಅಗತ್ಯವಿರುವ ಹಿನ್ನೆಲೆಯಲ್ಲಿ ಸಂಘ-ಸಂಸ್ಥೆಗಳು ಹಾಗೂ ಸಮಾಜ ಬಾಂಧವರು ವಿಶೇಷ ಸಹಾಯಧನ ನೀಡುವಂತೆ ಮನವಿ ಮಾಡಲಾಗಿದೆ. ಸಮಾಜದ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಈ ಕಾರ್ಯಕ್ಕೆ ಸಲಹೆ, ಮಾರ್ಗದರ್ಶನ ಹಾಗೂ ಆರ್ಥಿಕ ಸಹಕಾರ ನೀಡುವಂತೆ ಕೋರಲಾಗಿದೆ.

‘ಬಿನ್ನವತ್ತಳೆ’ ಪರಿಸ್ಕೃತ ಆವೃತ್ತಿ ಮತ್ತು ‘ರಾಮಕ್ಷತ್ರಿಯ ಕುಟುಂಬ ದೇವಸ್ಥಾನ, ಕುಲದೇವರು ಮತ್ತು ಸಂಘಟನೆಗಳ ವಿಳಾಸದ ಡೈರೆಕ್ಟರಿ–2026’ ಲೋಕಾರ್ಪಣೆಗೊಳ್ಳಲಿದ್ದು, ಸಮಾಜದವರು ತಮ್ಮ ವ್ಯಾಪ್ತಿಯಲ್ಲಿರುವ ಕುಟುಂಬ ದೇವಸ್ಥಾನಗಳು ಹಾಗೂ ಸಂಘಟನೆಗಳ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಸಹಕರಿಸುವಂತೆ ಮನವಿ ಮಾಡಲಾಗಿದೆ.

ರಾಮಕ್ಷತ್ರಿಯ ಇತಿಹಾಸ ಮ್ಯೂಸಿಯಂ ಸ್ಥಾಪನೆಗೆ ಧನಸಹಾಯ ನೀಡಲು ಇಚ್ಛಿಸುವವರು ಶಿವರಾಮ ಕಾಸರಗೋಡು ಅವರ ಸಂಪರ್ಕ ಸಂಖ್ಯೆಯ ಮೂಲಕ ಸಹಕರಿಸುವಂತೆ ಕೋರಲಾಗಿದೆ.