ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಹೈನುಗಾರಿಕೆ ತರಬೇತಿ ಕಾರ್ಯಕ್ರಮ

0
10

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಉಡುಪಿ ತಾಲೂಕಿನ ಬೆಳ್ಳಂಪಳ್ಳಿ ಕಾರ್ಯಕ್ಷೇತ್ರದ ಕಂಬಳಮಜಲೂ ಗ್ರಾಮದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದ ಅಂಗವಾಗಿ ಹೈನುಗಾರಿಕೆ ತರಬೇತಿ ಕಾರ್ಯಕ್ರಮ ನಡೆಯಿತು.

ಹಿರಿಯ ಪಶುವೈದ್ಯರಾದ ಡಾ. ಮಂಜುನಾಥ ಅಡಿಗ, ಪಶು ಸಹಾಯಕಿ ವಿಜಯಲಕ್ಷ್ಮಿ, ಒಕ್ಕೂಟದ ಕೋಶಾಧಿಕಾರಿ ಮುದ್ದು ನಾಯ್ಕ್, ಕೃಷಿ ಮೇಲ್ವಿಚಾರಕ ರಾಮು ಹಾಗೂ ಸಂಘದ ಸದಸ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಪ್ರಸ್ತಾವಿಕ ಮಾತುಗಳಲ್ಲಿ ಕೃಷಿ ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳು ಹಾಗೂ ಪೂಜ್ಯರ ಜನಪರ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕೃಷಿ ಮತ್ತು ಹೈನುಗಾರಿಕೆಯ ಮಹತ್ವ, ಹೈನುಗಾರಿಕೆಯನ್ನು ಲಾಭದಾಯಕವಾಗಿ ನಡೆಸಲು ರೈತರು ಹೊಂದಿರಬೇಕಾದ ಆಸಕ್ತಿ ಹಾಗೂ ಅಗತ್ಯ ಕ್ರಮಗಳ ಕುರಿತು ವಿವರಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪಶುವೈದ್ಯಾಧಿಕಾರಿ ಡಾ. ಮಂಜುನಾಥ ಅಡಿಗ ಅವರು ಲಾಭದಾಯಕ ಹೈನುಗಾರಿಕೆಯಲ್ಲಿ ವೈಜ್ಞಾನಿಕ ವಿಧಾನಗಳ ಅಳವಡಿಕೆಯ ಅಗತ್ಯವನ್ನು ವಿವರಿಸಿದರು. ಉತ್ತಮ ಹಸುಗಳ ಆಯ್ಕೆ, ಕರುಗಳ ಪಾಲನೆ, ವಿವಿಧ ವೈಜ್ಞಾನಿಕ ಆಹಾರ ಪದ್ಧತಿಗಳು, ಹಸುಗಳ ಆರೋಗ್ಯ ಕಾಪಾಡುವ ವಿಧಾನಗಳು ಸೇರಿದಂತೆ ಹೈನುಗಾರಿಕೆಗೆ ಸಂಬಂಧಿಸಿದ ಹಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ವಿಜಯೇಂದ್ರ ನಾಯ್ಕ್, ನೂತನ ಅಧ್ಯಕ್ಷ ಪರಮೇಶ್ವರ ಆಚಾರ್ಯ, ಜನಜಾಗೃತಿ ವೇದಿಕೆ ಸದಸ್ಯ ಜಯಾನಂದ ನಾಯ್ಕ್, ಸ್ಥಳೀಯ ಸೇವಾ ಪ್ರತಿನಿಧಿ ಸುಧಾಕರ ನಾಯ್ಕ್ ಸೇರಿದಂತೆ ಸುಮಾರು 45 ಮಂದಿ ಸ್ವಸಹಾಯ ಸಂಘಗಳ ಹಾಗೂ ಪ್ರಗತಿಬಂಧು ಸದಸ್ಯರು, ರೈತ ಮಹಿಳೆಯರು ಮತ್ತು ಗ್ರಾಮಸ್ಥರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.

ವೈಜ್ಞಾನಿಕ ಹೈನುಗಾರಿಕೆಯ ಮೂಲಕ ರೈತರ ಆದಾಯ ಹೆಚ್ಚಿಸುವುದು, ಪಶುಸಂಗೋಪನೆಯಲ್ಲಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಗ್ರಾಮೀಣ ಕುಟುಂಬಗಳ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.