ರಾಜ್ಯಾದ್ಯಂತ ಎರಡು ದಿನಗಳಲ್ಲಿ 102 ಕುಡಿಯುವ ನೀರಿನ ಘಟಕಗಳ ಪರಿಶೀಲನೆ: 12 ಘಟಕಗಳಿಗೆ ಬೀಗ!

0
4

ಗಂಭೀರ ಲೋಪ ಪತ್ತೆ – 53 ಘಟಕಗಳಿಗೆ ನೋಟಿಸ್, 69 ನೀರಿನ ಮಾದರಿ ಸಂಗ್ರಹ

ರಾಜ್ಯದಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರಿನ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಆಹಾರ ಸುರಕ್ಷತಾ ಇಲಾಖೆ ವಿಶೇಷ ತಪಾಸಣಾ ಕಾರ್ಯಾಚರಣೆ ಕೈಗೊಂಡಿದೆ. ಅಕ್ಟೋಬರ್ 29 ಮತ್ತು 30ರಂದು ನಡೆದ ಎರಡು ದಿನಗಳ ಕಾರ್ಯಾಚರಣೆಯಲ್ಲಿ ರಾಜ್ಯಾದ್ಯಂತ ಒಟ್ಟು 102 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲಿಸಲಾಗಿದ್ದು, 69 ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ಪರಿಶೀಲನೆಯ ವೇಳೆ ಗಂಭೀರ ಲೋಪಗಳು ಕಂಡುಬಂದ 12 ಘಟಕಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದ್ದು, 53 ಘಟಕಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ದೇವನಹಳ್ಳಿಯ ಘಟಕವೊಂದರಲ್ಲಿ ಲೇಬಲಿಂಗ್ ದೋಷ ಹೊಂದಿದ್ದ ಒಂದು ಲೀಟರ್ ಸಾಮರ್ಥ್ಯದ 82 ಕೇಸ್ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮುಚ್ಚಲಾದ 12 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು:

  1. ಎಸ್‌ಎಂಆರ್ ಆಕ್ವಾ ಮಿನರಲ್ಸ್, ಮುಳಬಾಗಿಲು, ಕೋಲಾರ.
  2. ಎಸ್.ಪಿ. ಫುಡ್ ಆ್ಯಂಡ್ ಬೆವರೇಜಸ್, ಹಾಸನ.
  3. ಅವಂತಿ ಇಂಡಸ್ಟ್ರೀಸ್, ಮದನಾಯಕನಹಳ್ಳಿ, ಬೆಂಗಳೂರು ನಗರ.
  4. ಓಂ ಶಕ್ತಿ ಮಿನರಲ್ಸ್, ಮದನಾಯಕನಹಳ್ಳಿ, ಬೆಂಗಳೂರು ನಗರ.
  5. ಆಕ್ವಾ ರಿಫ್ರೆಶ್, ಕೆಐಎಡಿಬಿ, ಕಲಬುರಗಿ.
  6. ನಂದಿ ಫುಡ್ ಆ್ಯಂಡ್ ಬೆವರೇಜಸ್, ಕೆಐಎಡಿಬಿ, ಕಲಬುರಗಿ.
  7. ಸಾಯಿ ರಾಮ್ ಫುಡ್ ಬೆವರೇಜಸ್, ಬೀದರ್.
  8. ದಲಿಯಾ ಬೆವರೇಜಸ್, ಮೈಸೂರು ಗ್ರಾಮಾಂತರ.
  9. ಶ್ರೀ ದೇವಿ ಎಂಟರ್‌ಪ್ರೈಸಸ್, ಬನ್ನಿಮಂಟಪ, ಮೈಸೂರು.
  10. ಶ್ರೀ ದುರ್ಗಾ ಎಂಟರ್‌ಪ್ರೈಸಸ್, ಮೇಟಗಳ್ಳಿ, ಮೈಸೂರು.
  11. ಚಿರಂತನ್ ಫುಡ್ ಆ್ಯಂಡ್ ಬೆವರೇಜಸ್, ದಾವಣಗೆರೆ.
  12. ಎಂ.ಎಸ್. ಫುಡ್ ಆ್ಯಂಡ್ ಬೆವರೇಜಸ್, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ.

ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಲು ಯಾರಿಗೂ ಅವಕಾಶ ನೀಡುವುದಿಲ್ಲ. ಕುಡಿಯುವ ನೀರಿನ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸುವ ಘಟಕಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಪರಿಶೀಲನಾ ಕಾರ್ಯಾಚರಣೆ ಎರಡು ದಿನಗಳಿಗೆ ಸೀಮಿತವಾಗದೆ ರಾಜ್ಯಾದ್ಯಂತ ನಿರಂತರವಾಗಿ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ಇದೇ ವೇಳೆ ಸಾರ್ವಜನಿಕರು ಪ್ಯಾಕೇಜ್ಡ್ ಕುಡಿಯುವ ನೀರನ್ನು ಖರೀದಿಸುವಾಗ ಬಾಟಲಿಯ ಮೇಲಿರುವ FSSAI ಪರವಾನಗಿ ಸಂಖ್ಯೆ, ISI ಗುರುತು, ತಯಾರಿಕಾ ದಿನಾಂಕ ಹಾಗೂ ಬಾಟಲಿಯ ಸೀಲ್ ಸಮರ್ಪಕವಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ನೀರಿನ ಗುಣಮಟ್ಟದ ಬಗ್ಗೆ ಯಾವುದೇ ಅನುಮಾನ ಕಂಡುಬಂದಲ್ಲಿ ಆಹಾರ ಸುರಕ್ಷತಾ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.