ಹೆಬ್ರಿ ನಾರಾಯಣ ಗುರು ಸೇವಾ ಸಂಘದಿಂದ 172ನೇ ಜನ್ಮದಿನಾಚರಣೆ

0
15

ಗುರುಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಹೆಬ್ರಿ : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಹೆಬ್ರಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ 172 ನೇ ಜನ್ಮ ದಿನಾಚರಣೆಯ ಅಂಗವಾಗಿ ಗುರುಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 04.10.2026 ರಂದು ಸಂಘದ ಸಭಾ ಭವನದಲ್ಲಿ ಜರುಗಿತು.

ಗುರುಪೂಜೆಯ ಪ್ರಯುಕ್ತ ಶ್ರೀ ಗುರುವರಿಯರ ಭಾವಚಿತ್ರದೊಂದಿಗೆ ಬೆಳಿಗ್ಗೆ ಹೆಬ್ರಿ ಪೇಟೆಯಲ್ಲಿ ಬೃಹತ್ ವಾಹನ ಜಾಥ ನಡೆಯಿತು.
ನಂತರ ಸಂಘದ ಮಹಿಳಾ ಬಜನಾ ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮ ಹಾಗೂ ಗುರುಪೂಜೆ ನಡೆಯಿತು.

ನಂತರ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ ಮಾತನಾಡಿ ಹೆಬ್ರಿ ಬಿಲ್ಲವ ಸಂಘದ ಅಧ್ಯಕ್ಷರಾದ ಬೆಳಂಜೆ ಹರೀಶ್ ಪೂಜಾರಿ ಅವರು ಸಂಘವನ್ನು ತುಂಬಾ ಯಶಸ್ವಿಯಾಗಿ ಮುನ್ನಡೆಸುತ್ತಿದ್ದು ಅವರಿಗೆ ನಮ್ಮೆಲ್ಲರ ಬೆಂಬಲ ಬೇಕಾಗಿದೆ, ಸಮಾಜದ ಋಣ ಇಂದು ನನ್ನ ಮೇಲಿದೆ ಬಿಲ್ಲವ ಸಮಾಜಕ್ಕೆ ಸರ್ಕಾರದ ಮಟ್ಟದಲ್ಲಿ ಸೌಲಭ್ಯಗಳು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ,
ನಮ್ಮ ಸಮಾಜವು ಉನ್ನತಿಯನ್ನು ಏರ ಬೇಕಾದರೆ ಕೇವಲ ರಾಜಕೀಯದಿಂದ ಮಾತ್ರ ಸಾಧ್ಯವಾಗುವುದಿಲ್ಲ ನಮ್ಮ ಸಮಾಜದ ಪ್ರತಿಯೊಬ್ಬ ಯುವಕ ಯುವತಿಯರು ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಎಲ್ಲ ರೀತಿಯಲ್ಲೂ ಪ್ರಗತಿಯನ್ನು ಕಂಡಾಗ ಮಾತ್ರ ಅದು ಸಾಧ್ಯ ಎಂದು ತಿಳಿಸಿದರು.

ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಬೆಳಂಜೆ ಹರೀಶ್ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ ನಾರಾಯಣ ಗುರುಗಳ ಜನ್ಮದಿನದ ಆಚರಣೆ ಮಾಡುತ್ತಿರುವುದು ನಮ್ಮ ಸಮಾಜಕ್ಕೆ ಹೆಮ್ಮೆ ಮತ್ತು ಗೌರವ ಒಂದು ಕಾಲದಲ್ಲಿ ಬಹಳ ಅಸ್ಪ್ರಶ್ಯತೆಯನ್ನು ಅನುಭವಿಸಿದ ಸಮಾಜ ನಮ್ಮದು, ನಮ್ಮ ಸಮಾಜಕ್ಕೆ ಒಂದು ಸಂಘಟನೆಯ ರೂಪ ಕೊಟ್ಟು ಶಕ್ತಿ ನೀಡಿದವರು ನಾರಾಯಣ ಗುರುಗಳು, ಅವರು ಹಾಕಿಕೊಟ್ಟ ದಾರಿಯಲ್ಲಿ ಅವರ ತತ್ವದಂತೆ ನಾವೆಲ್ಲ ನಡೆಯಬೇಕು ಎಂದು ತಿಳಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ಮಾತನಾಡಿ ಒಂದು ಕಾಲದಲ್ಲಿ ಸಮಾಜದಲ್ಲಿ ತುಂಬಾ ಕೆಳ ಮಟ್ಟದಲ್ಲಿ ಇದ್ದ ಬಿಲ್ಲವ ಸಮಾಜವು ಇಂದು ಸಮಾಜದ ಮುಖ್ಯ ವಾಹಿನಿಯಲ್ಲಿ ಎಲ್ಲಾ ಚಟುವಟಿಕೆಗಳ ನೇತೃತ್ವವನ್ನು ವಹಿಸುತ್ತಿರುವುದು ತುಂಬಾ ಸಂತೋಷದ ಸಂಗತಿ, ಮುಂದಿನ ದಿನಗಳಲ್ಲಿನಮ್ಮ ಸಮಾಜದ ಯುವಕ ಯುವತಿಯರು ಉನ್ನತ ಶಿಕ್ಷಣವನ್ನು ಪಡೆದು ಸಮಾಜದ ಆಯಕಟ್ಟಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಂತಾಗಬೇಕು, ನಾರಾಯಣ ಗುರು ಅಭಿವೃದ್ಧಿ ನಿಗಮದ ಮೂಲಕ ಮಂಜುನಾಥ ಪೂಜಾರಿ ಅವರು ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡುತ್ತಿದ್ದಾರೆ ನಾವೆಲ್ಲ ಸೇರಿ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಶಕ್ತಿ ತುಂಬುವಂತ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಲ್ಕಿ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಸೂರತ್ ಉದ್ಯಮಿ ಮುದ್ರಾಡಿ ಮನೋಜ್ ಸಿ ಪೂಜಾರಿ, ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್, ಸಂಘದ ಗೌರವಾಧ್ಯಕ್ಷ ಎಚ್ ಅಣ್ಣಪ್ಪ ಪೂಜಾರಿ, ಹೆಬ್ರಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ತಾರಾನಾಥ ಬಂಗೇರ, ಸಂಘದ ಸ್ಥಾಪಕ ಅಧ್ಯಕ್ಷರಾದ ನಾರಾಯಣ ಪೂಜಾರಿ, ಮುನಿಯಾಲು ಕೆಪಿಎಸ್ ಶಿಕ್ಷಕ ಪ್ರಕಾಶ್ ಪೂಜಾರಿ ಮಾತಿಬೆಟ್ಟು, ಸಂಘದ ಕಾರ್ಯದರ್ಶಿ ಸಂತೋಷ್ ಪೂಜಾರಿ, ಕೋಶಾಧಿಕಾರಿ ರತ್ನಾಕರ ಪೂಜಾರಿ ಕುಚ್ಚೂರು, ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಜಯಂತಿ ಪೂಜಾರಿ, ಮಹಿಳಾ ಘಟಕದ ಕಾರ್ಯದರ್ಶಿ ಹೇಮಾವತಿ ಪೂಜಾರಿ ಬಲ್ಲಾಡಿ, ಯುವ ಘಟಕದ ಅಧ್ಯಕ್ಷ ಪ್ರವೀಣ್ ಪೂಜಾರಿ ತಂಕೋಡು, ಯುವ ಘಟಕದ ಕಾರ್ಯದರ್ಶಿ ಸುನಿಲ್ ಪೂಜಾರಿ ಕನ್ಯಾನ ಮುಂತಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅತಿಥಿಗಳನ್ನು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ವಿನಾಯಕ್ ಮುದ್ರಾಡಿ ಹಾಗೂ ಚೈತ್ರ ಕಬ್ಬಿನಾಲೆ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಭಾಕರ್ ಪೂಜಾರಿ ವಂದಿಸಿದರು.