ಸೆ.4 & 5 ರಂದು ಕೊಳಕೆ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ 25ನೇ ವರ್ಷದ ಮೊಸರು ಕುಡಿಕೆ ಉತ್ಸವ

0
56

ಇರ್ವತ್ತೂರು : ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಇರ್ವತ್ತೂರು ಗ್ರಾಮದ ಕೊಳಕೆ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ 25ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆಪ್ಟೆಂಬರ್ 4 ಮತ್ತು 5ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸೆಪ್ಟೆಂಬರ್ 4ರಂದು ಸಂಜೆ 5.30ರಿಂದ 7.30ರವರೆಗೆ ಶ್ರೀ ವೇಣುಗೋಪಾಲಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ಶ್ರೀ ವೇಣುಗೋಪಾಲಕೃಷ್ಣ ಯಕ್ಷಗಾನ ಕಲಾಬಳಗದ ವತಿಯಿಂದ ‘ಶನೀಶ್ವರ ಮಹಾತ್ಮೆ’ ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ರಾತ್ರಿ 11 ಗಂಟೆಗೆ ಶ್ರೀ ದೇವರಿಗೆ ವಿಶೇಷ ಪೂಜೆ ನೆರವೇರಲಿದೆ.

ಸೆಪ್ಟೆಂಬರ್ 5ರಂದು ಬೆಳಿಗ್ಗೆ 9 ಗಂಟೆಗೆ ಉತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ನಾರಾಯಣ ಭಟ್ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ. ಕೊಳಕೆ ಮನೆ, ಇರ್ವತ್ತೂರು ಇದರ ಜಯಕೀರ್ತಿ ಕಡಂಬ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ಇರ್ವತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಭರತ್ ಕುಮಾರ ಜೈನ್, ಮಾಜಿ ಸದಸ್ಯರಾದ ಚಂದ್ರರಾಜ್ ಅತಿಕಾರಿ ಹಾಗೂ ಬಾಲಕೃಷ್ಣ ಶೆಟ್ಟಿ, ಗುಜ್ಜಾಕ್ಯಾರು ಶೇಖರ ಶೆಟ್ಟಿ ಮತ್ತು ಗರಡಿಮನೆ ಗೋಪಾಲ ಪೂಜಾರಿ ಉಪಸ್ಥಿತರಿರಲಿದ್ದಾರೆ.

ಅದೇ ದಿನ ಬೆಳಿಗ್ಗೆ 8 ಗಂಟೆಯಿಂದ ವಿವಿಧ ಮನೋರಂಜನಾ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. 1ರಿಂದ 4 ವರ್ಷದೊಳಗಿನ ಹಾಗೂ 5ರಿಂದ 7 ವರ್ಷದೊಳಗಿನ ಮಕ್ಕಳಿಗಾಗಿ ಮುದ್ದುಕೃಷ್ಣ ಸ್ಪರ್ಧೆ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಆಕರ್ಷಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸುವವರು ಸೆಪ್ಟೆಂಬರ್ 2ರೊಳಗೆ ಉತ್ಸವ ಸಮಿತಿ ಸದಸ್ಯರಲ್ಲಿ ತಮ್ಮ ಹೆಸರು ನೋಂದಾಯಿಸಬೇಕು. ನಂತರ ಬರುವ ನೋಂದಣಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಮಿತಿ ತಿಳಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ಪರ್ಧೆಯ ದಿನ ಬೆಳಿಗ್ಗೆ 8 ಗಂಟೆಯೊಳಗೆ ಸ್ಥಳದಲ್ಲಿ ಹಾಜರಿರಬೇಕು. ಮುದ್ದುಕೃಷ್ಣ ಸ್ಪರ್ಧೆಯು ಇರ್ವತ್ತೂರು ಗ್ರಾಮದ ನಿವಾಸಿಗಳ ಮಕ್ಕಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಅಪರಾಹ್ನ 1 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. 25ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ನಡೆಯಲಿರುವ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳಲ್ಲಿ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಮೊಸರು ಕುಡಿಕೆ ಉತ್ಸವ ಸಮಿತಿ ಮನವಿ ಮಾಡಿದೆ.