ಮಕ್ಕಳಲ್ಲಿ ಓದಿನ ಪ್ರಜ್ಞೆ ಬೆಳೆಸಿ – ಬ್ರಹ್ಮಶ್ರೀ ಪುರೋಹಿತ ಕೆ ರಾಮಕೃಷ್ಣ ಆಚಾರ್ಯ ಬದಿಯಡ್ಕ
ಕಾಸರಗೋಡು: ಮಕ್ಕಳಲ್ಲಿ ಪ್ರತೀ ಕನ್ನಡ ಪೋಷಕರೂ ಕೂಡಾ ಕನ್ನಡ ಪುಸ್ತಕಗಳನ್ನು ಓದುವ ಆಸಕ್ತಿಯನ್ನು ಮೂಡಿಸಬೇಕು. ಇದರಿಂದ ಎಳೆಯ ಮಕ್ಕಳಲ್ಲಿ ಜ್ಞಾನ ವೃದ್ಧಿಯಾಗುತ್ತದೆ ‘ ಎಂದು ಆರಿಕ್ಕಾಡಿ ಕಾರ್ಳೇ ಕಾಳಿಕಾಂಬಾ ದೇವಸ್ಥಾನದ ತಂತ್ರಿವರ್ಯರಾದ ಬ್ರಹ್ಮಶ್ರೀ ಪುರೋಹಿತ ಕೆ ರಾಮಕೃಷ್ಣ ಆಚಾರ್ಯ ಹೇಳಿದರು. ಅವರು ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಸೂರಂಬೈಲು ಸರಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಡೆದ ಕನ್ನಡ ಸಾಹಿತ್ಯ ಮಾರ್ಗದರ್ಶನ ಅಭಿಯಾನದ 2ನೇ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ತಜ್ಞ ವಿ ಬಿ ಕುಳಮರ್ವ ಮಾತನಾಡಿ,’ಕಾಸರಗೋಡು ಜಿಲ್ಲೆಯು ಬಹುಭಾಷಾ ಸಂಗಮ ಭೂಮಿ. ಎಲ್ಲಾ ಭಾಷೆಗಳೂ ಕೂಡಾ ಮೂಲ ಭಾಷೆಯ ಮಕ್ಕಳು. ಸಮಾಜವೆಂಬ ಕೈಗೆ ಬೆರಳುಗಳ ಹಾಗೆ ಎಲ್ಲಾ ಭಾಷೆಗಳೂ ಬೇಕು’ ಎಂದು ಹೇಳಿದರು.
ಸಭೆಯಲ್ಲಿ ಪರಿಷತ್ತಿನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ ಡಾ. ಕೆ. ವಾಮನ್ ರಾವ್ ಬೇಕಲ್, ಕಾಸರಗೋಡಿನ ಕನ್ನಡ ಭವನ ಪ್ರಕಾಶನದ ಮುಖ್ಯಸ್ಥೆ ಸಂಧ್ಯಾರಾಣಿ ಟೀಚರ್, ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು, ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕೊಳ್ಚಪ್ಪೆ ಗೋವಿಂದ ಭಟ್, ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಮೊಳೆಯಾರ್ ಎಡನೀರು, ಶಾಲೆಯ ಪಿಟಿಎ ಉಪಾಧ್ಯಕ್ಷ ದಯಾನಂದ ಪೆರ್ಣೆ, ಹೇಮಲತಾ ಟೀಚರ್ ಮೊದಲಾದವರು ಇದ್ದರು. ಧರ್ಶೀನ್ ಚಿರಾಲ್ ಡಿ, ಧನ್ವಿಕಾ ಡಿ ಪ್ರಾರ್ಥನೆ ಹಾಡಿದರು. ಶಿಕ್ಷಕಿ ಚಿತ್ರಕಲಾ ದೇವರಾಜ ಆಚಾರ್ಯ ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ ಡಿ ವಂದಿಸಿದರು. ದೇವರಾಜ ಆಚಾರ್ಯ ಸೂರಂಬೈಲ್ ನಿರೂಪಿಸಿದರು. ನಂತರ ನಡೆದ ಶಿಬಿರದ ಪ್ರಬಂಧ ರಚನಾ ತರಬೇತಿಯಲ್ಲಿ ವಿ ಬಿ ಕುಳಮರ್ವ, ಕವನ ರಚನಾ ತರಬೇತಿಯಲ್ಲಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಹಾಗೂ ವ್ಯಂಗ್ಯಚಿತ್ರ ರಚನಾ ತರಬೇತಿಯಲ್ಲಿ ವಿರಾಜ್ ಅಡೂರು ಮಾರ್ಗದರ್ಶನ ನೀಡಿದರು. ಶಿಬಿರದಲ್ಲಿ ಸುಮಾರು 75ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು.