ಇರಾನ್ ಬಂದ್ ಆದೇಶಕ್ಕೂ ಮುನ್ನವೇ ಪಾರಾದ ಭಾರತದ 3 ಸೂಪರ್ ಟ್ಯಾಂಕರ್‌ಗಳು – 94 ಸಿಬ್ಬಂದಿ ಸುರಕ್ಷಿತ!

0
1

ಇರಾನ್ ಮಿಲಿಟರಿ ಮತ್ತೊಮ್ಮೆ ಬಿಕ್ಕಟ್ಟಿನ ಕೇಂದ್ರಬಿಂದುವಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಬಂದ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸುವ ಕೆಲವೇ ಗಂಟೆಗಳ ಮುನ್ನ, ಭಾರತದ(India) ಮೂರು ಬೃಹತ್ ಕಚ್ಚಾ ತೈಲ ಸಾಗಣೆ ಹಡಗುಗಳು (ಸೂಪರ್ ಟ್ಯಾಂಕರ್‌ಗಳು) ಅಲ್ಲಿಂದ ಯಶಸ್ವಿಯಾಗಿ ಪಾರಾಗಿವೆ.
ಈ ಮೂರೂ ಹಡಗುಗಳಲ್ಲಿದ್ದ 94 ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದು, ಸ್ವದೇಶದತ್ತ ಸಾಗುತ್ತಿದ್ದಾರೆ. ಲೆಬನಾನ್ ಮೇಲಿನ ಇಸ್ರೇಲ್ ದಾಳಿ ಮತ್ತು ಅಮೆರಿಕದ ಭರವಸೆ ದ್ರೋಹವನ್ನು ಖಂಡಿಸಿ ಇರಾನ್ ಜಲಸಂಧಿಯನ್ನು ಬಂದ್ ಮಾಡಿದೆ. ಆದರೆ, ಈ ಆದೇಶ ಹೊರಬೀಳುವ ಮುನ್ನವೇ ಭಾರತೀಯ ಹಡಗುಗಳು ಸುರಕ್ಷಿತವಾಗಿ ಹೊರಬಂದಿವೆ.

ಭಾರತದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಕೇಂದ್ರ ಸಚಿವ ಸರ್ಬಾನಂದ್ ಸೋನೊವಾಲ್ ಅವರು ಶನಿವಾರ ಸಂಜೆ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಭಾರತದ ಧ್ವಜ ಹೊಂದಿರುವ ಮೂರು ಪ್ರಮುಖ ತೈಲ ಹಡಗುಗಳಾದ ದೇಶ್ ವೈಭವ್, ದೇಶ್ ವಿಭೋರ್ ಮತ್ತು ಸನ್ಮಾರ್ ಹೆರಾಲ್ಡ್ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದ್ದು, ಭಾರತದತ್ತ ಪ್ರಯಾಣ ಬೆಳೆಸಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಾರತಕ್ಕೆ ಸಿಗಲಿದೆ 8.6 ಲಕ್ಷ ಟನ್ ತೈಲ!
ಈ ಮೂರು ಬೃಹತ್ ಹಡಗುಗಳು ಒಟ್ಟಾರೆಯಾಗಿ 8,60,000 ಟನ್‌ಗಳಿಗಿಂತ ಹೆಚ್ಚು ಕಚ್ಚಾ ತೈಲವನ್ನು ಹೊತ್ತು ತರುತ್ತಿವೆ (ಪ್ರತಿ ಹಡಗಿನಲ್ಲಿ ಸುಮಾರು 2.85 ಲಕ್ಷ ಟನ್ ತೈಲವಿದೆ). ಜೂನ್ 24 ರಿಂದ ಜುಲೈ 1 ರ ನಡುವೆ ಇವು ಭಾರತದ ಬಂದರುಗಳನ್ನು ತಲುಪಲಿವೆ. ದೇಶ್ ವೈಭವ್ ಮತ್ತು ದೇಶ್ ವಿಭೋರ್: ಜೂನ್ 24 ರಂದು ಗುಜರಾತ್‌ನ ವಾದಿನಾರ್ ಮತ್ತು ಸಿಕ್ಕಾ ಬಂದರುಗಳನ್ನು ತಲುಪಲಿವೆ. ಸನ್ಮಾರ್ ಹೆರಾಲ್ಡ್: ಎಲ್ಲರಿಗಿಂತ ಕೊನೆಯಲ್ಲಿ ಜಲಸಂಧಿ ದಾಟಿದ ಈ ಹಡಗು ಜುಲೈ 1 ರಂದು ಒಡಿಶಾದ ಪಾರದೀಪ್ ಬಂದರು ತಲುಪುವ ನಿರೀಕ್ಷೆಯಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತೀಯ ನಾವಿಕರ ಮತ್ತು ದೇಶದ ಇಂಧನ ಭದ್ರತೆಗೆ ಸರ್ಕಾರ ಗರಿಷ್ಠ ಆದ್ಯತೆ ನೀಡುತ್ತಿದ್ದು, ಎಲ್ಲಾ ಸಂಬಂಧಿತ ಸಂಸ್ಥೆಗಳೊಂದಿಗೆ ಸಚಿವಾಲಯ ನಿರಂತರ ಸಂಪರ್ಕದಲ್ಲಿದೆ ಎಂದು ಸೋನೊವಾಲ್ ತಿಳಿಸಿದ್ದಾರೆ. ಪ್ರಸ್ತುತ ಪರ್ಷಿಯನ್ ಕೊಲ್ಲಿಯ ಪಶ್ಚಿಮ ಭಾಗದಲ್ಲಿ ಇನ್ನೂ 10 ಭಾರತೀಯ ಹಡಗುಗಳು ಬಾಕಿ ಉಳಿದಿವೆ.

ಒಪ್ಪಂದ ಮುರಿದ ಇರಾನ್; ಮತ್ತೆ ಜಲಸಂಧಿ ಬಂದ್!
ಅಮೆರಿಕ ಮತ್ತು ಇರಾನ್ ನಡುವೆ ಇತ್ತೀಚೆಗಷ್ಟೇ ಮಧ್ಯಂತರ ಶಾಂತಿ ಒಪ್ಪಂದ ಏರ್ಪಟ್ಟಿತ್ತು. ಇದರ ಅನ್ವೇಷಣೆಯಲ್ಲಿ ಇರಾನ್ ತನ್ನ ಯುರೇನಿಯಂ ದಾಸ್ತಾನು ಕರಗಿಸಲು ಒಪ್ಪಿಕೊಂಡರೆ, ಪ್ರತಿಯಾಗಿ ಅಮೆರಿಕ ಇರಾನ್ ಮೇಲಿನ ತೈಲ ನಿರ್ಬಂಧಗಳನ್ನು ಸಡಿಲಿಸಿತ್ತು. ಪರಿಣಾಮವಾಗಿ ಕಳೆದ ಗುರುವಾರವಷ್ಟೇ ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ಹಿಂತೆಗೆದುಕೊಂಡು, ಜಲಸಂಧಿಯನ್ನು ಮುಕ್ತಗೊಳಿಸಿತ್ತು.

ಆದರೆ ಶನಿವಾರ ಸಂಜೆ ಇರಾನ್ ಮಿಲಿಟರಿ ದಿಢೀರ್ ಆಗಿ ಜಲಸಂಧಿಯನ್ನು ಮತ್ತೆ ಬಂದ್ ಮಾಡಿದೆ. ಲೆಬನಾನ್‌ನಲ್ಲಿ ಇಸ್ರೇಲ್ ನಿರಂತರವಾಗಿ ನಡೆಸುತ್ತಿರುವ ವೈಮಾನಿಕ ದಾಳಿಗಳು ಮತ್ತು ಯುದ್ಧ ನಿಲ್ಲಿಸುವಲ್ಲಿ ಅಮೆರಿಕ ತೋರುತ್ತಿರುವ ಉದಾಸೀನತೆಯು ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಇರಾನ್ ಆರೋಪಿಸಿದೆ.

ಸ್ವಿಟ್ಜರ್‌ಲ್ಯಾಂಡ್ ಮಾತುಕತೆ ಮೇಲೆ ಎಲ್ಲರ ಕಣ್ಣು
ಒಂದೆಡೆ ಜಲಸಂಧಿ ಬಂದ್ ಮಾಡಿದ್ದರೂ, ಮತ್ತೊಂದೆಡೆ ಇರಾನ್‌ನ ವಿದೇಶಾಂಗ ಸಚಿವರು ಸೇರಿದಂತೆ ಉನ್ನತ ಮಟ್ಟದ ನಿಯೋಗವು ಅಮೆರಿಕದೊಂದಿಗೆ ಚರ್ಚಿಸಲು ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರಯಾಣ ಬೆಳೆಸಿದೆ. ಪಾಕಿಸ್ತಾನ ಮತ್ತು ಕತಾರ್ ದೇಶಗಳ ಮಧ್ಯಸ್ಥಿಕೆಯಲ್ಲಿ ರವಿವಾರದಿಂದ ಮಾತುಕತೆಗಳು ಆರಂಭವಾಗಲಿವೆ. ಅಮೆರಿಕ ತನ್ನ ಭರವಸೆಗಳನ್ನು ಈಡೇರಿಸದಿದ್ದರೆ ಇಡೀ ಒಪ್ಪಂದವೇ ರದ್ದಾಗಲಿದೆ ಎಂದು ಇರಾನ್ ಎಚ್ಚರಿಸಿದೆ.

LEAVE A REPLY

Please enter your comment!
Please enter your name here