ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ 300 ಬಾಕ್ಸ್ ಅಕ್ರಮ ಮದ್ಯ ವಶ

0
60

ಪಡುಬಿದ್ರಿ : ಗೋವಾ ರಾಜ್ಯದಿಂದ ಮಂಗಳೂರಿಗೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬೃಹತ್ ಪ್ರಮಾಣದ ಮದ್ಯವನ್ನು ಪಡುಬಿದ್ರಿ ಠಾಣಾ ಪೊಲೀಸರು ಮಂಗಳವಾರ ಹೆಜಮಾಡಿ ಟೋಲ್ ಪ್ಲಾಜಾ ಬಳಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟು 22.35 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ಜಪ್ತಿ ಮಾಡಲಾಗಿದೆ.

ಕಾರವಾರ ಕಿನ್ನಾರ ಗ್ರಾಮದ ವಿನಯ್ (47), ನಂದಗಡದ ಗಜಾನನ ಮಹಾಬಲೇಶ್ವರ ನಾಯ್ಕ್ (45), ಅಮದಹಳ್ಳಿಯ ಸುಜಿತ್ ತಾಳೆಕೆರೆ (25) ಹಾಗೂ ಶಿರ್ವಾಡ ಗ್ರಾಮದ ಲಾರೆನ್ಸ್ ಥಾಮಸ್ ಮೆಂಡೋನ್ಸ್ (49) ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಮೇರೆಗೆ ದಾಳಿ

ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಇವರಿಗೆ ಲಭಿಸಿದ ಖಚಿತ ಮಾಹಿತಿಯಂತೆ, ಪಡುಬಿದ್ರಿ ಠಾಣಾ ವ್ಯಾಪ್ತಿಯ ಹೆಜಮಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಗೇಟ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸಿದರು. ಈ ವೇಳೆ ಗೋವಾದಿಂದ ಮಂಗಳೂರು ಕಡೆಗೆ ಅಕ್ರಮ ಮದ್ಯ ಸಾಗಿಸುತ್ತಿದ್ದ ಮಹೀಂದ್ರಾ ಪಿಕ್ ಇನ್ಸುಲೇಟರ್ ವಾಹನ ಹಾಗೂ ಅದಕ್ಕೆ ಎಸ್ಕಾರ್ಟ್ ನೀಡುತ್ತಿದ್ದ ಮಾರುತಿ ಸ್ವಿಫ್ಟ್ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಮದ್ಯ ಪತ್ತೆಯಾಗಿದೆ.

ಕಾರ್ಯಾಚರಣೆಯಲ್ಲಿ ಪೊಲೀಸರು 14.35 ಲಕ್ಷ ರೂಪಾಯಿ ಮೌಲ್ಯದ 2,583 ಲೀಟರ್ ಮದ್ಯ, ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಮಹೀಂದ್ರಾ ಪಿಕ್ ಇನ್ಸುಲೇಟರ್ ವಾಹನ ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಸ್ವಿಫ್ಟ್ ಕಾರು ಸೇರಿದಂತೆ ಒಟ್ಟು ರೂ. 22,35,000 ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳ ಪೈಕಿ ವಿನಯ್ ಎಂಬಾತನ ವಿರುದ್ಧ ಈಗಾಗಲೇ ಕಾರವಾರ ಜಿಲ್ಲೆಯ ಚಿತ್ತಾಕುಲ, ಕಾರವಾರ ಗ್ರಾಮಾಂತರ ಹಾಗೂ ಅಬಕಾರಿ ಪೊಲೀಸ್ ಠಾಣೆಗಳಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.