ನೇಪಾಳ ಪ್ರವಾಹದಲ್ಲಿ 300 ಭಾರತೀಯ ಯಾತ್ರಿಕರು ನಾಪತ್ತೆ

0
15

ನೇಪಾಳದ ರಸುವಾ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ ಸಾವಿನ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿದ್ದ ಸುಮಾರು 300 ಭಾರತೀಯರು ಸೇರಿದಂತೆ 500 ವಿದೇಶಿ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ತಿಳಿಸಿದ್ದಾರೆ.

ಕಠ್ಮಂಡುವಿನಲ್ಲಿ ನಡೆದ ‘ಎನ್‌ಡಿಟಿವಿ ವಿಶ್ವ ಅನ್ವಿಕ್ಷಾ ಶೃಂಗಸಭೆ’ಯಲ್ಲಿ ಮಾತನಾಡಿದ ಸಚಿವರು, ಕೆಲವೇ ಗಂಟೆಗಳ ಅವಧಿಯಲ್ಲಿ ಭಾರಿ ಪ್ರಮಾಣದ ನೀರು ಹರಿದುಬಂದು ಹಲವು ಪಟ್ಟಣಗಳು ಮತ್ತು ಗ್ರಾಮಗಳಿಗೆ ವ್ಯಾಪಕ ಹಾನಿ ಉಂಟುಮಾಡಿದೆ ಎಂದು ವಿವರಿಸಿದರು.

ಸಾವಿರಾರು ಕುಟುಂಬಗಳು ನಿರಾಶ್ರಿತ

ಹಠಾತ್ ಪ್ರವಾಹದಿಂದ ಸಾವಿರಾರು ಕುಟುಂಬಗಳು ಮನೆ-ಮಠ ಕಳೆದುಕೊಂಡಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಪ್ರವಾಹದಿಂದ ಉಂಟಾಗಿರುವ ಒಟ್ಟು ಹಾನಿಯ ಪ್ರಮಾಣವನ್ನು ನಿಖರವಾಗಿ ಅಂದಾಜಿಸಲು ನೇಪಾಳದ ಆಡಳಿತ ಮತ್ತು ರಕ್ಷಣಾ ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಭಾರತೀಯ ಯಾತ್ರಿಕರ ಸಂಪರ್ಕಕ್ಕೆ ಯತ್ನ

ಕೈಲಾಸ ಮಾನಸ ಸರೋವರ ಯಾತ್ರೆಗಾಗಿ ಟಿಬೆಟ್ ಗಡಿ ಮಾರ್ಗದಲ್ಲಿದ್ದ ಸುಮಾರು 300 ಭಾರತೀಯ ಯಾತ್ರಿಕರ ಮೊಬೈಲ್ ಸಂಪರ್ಕ ಕಡಿತಗೊಂಡಿದೆ. ಅವರ ಸ್ಥಳ ಪತ್ತೆಹಚ್ಚಲು ನೇಪಾಳ ಸರ್ಕಾರವು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಭಾರತೀಯರು ಸೇರಿದಂತೆ ವಿದೇಶಿ ಪ್ರಜೆಗಳ ರಕ್ಷಣೆಗೆ ನೇಪಾಳ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಪ್ರದೇಶಗಳಲ್ಲಿ ನಾಪತ್ತೆಯಾದ ಯಾತ್ರಿಕರ ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಭಾರತದಿಂದ ತುರ್ತು ನೆರವು

ವಿಪತ್ತು ಸಂಭವಿಸಿದ ಬಳಿಕ ಭಾರತ ಸರ್ಕಾರ ತ್ವರಿತವಾಗಿ ಸ್ಪಂದಿಸಿದ್ದು, 10 ಟನ್ ತುರ್ತು ಪರಿಹಾರ ಸಾಮಗ್ರಿಗಳು ಹಾಗೂ ವೈದ್ಯಕೀಯ ನೆರವು ರವಾನಿಸಿದೆ. ಸಂಕಷ್ಟದ ಸಂದರ್ಭದಲ್ಲಿ ನೆರವು ನೀಡಿದ ಭಾರತ ಸರ್ಕಾರಕ್ಕೆ ನೇಪಾಳದ ವಿದೇಶಾಂಗ ಸಚಿವರು ಕೃತಜ್ಞತೆ ಸಲ್ಲಿಸಿದ್ದಾರೆ.

ಸಂಪರ್ಕ ವ್ಯವಸ್ಥೆ ಪುನಃಸ್ಥಾಪನೆಗೆ ಕ್ರಮ

ಪ್ರವಾಹದ ತೀವ್ರತೆಗೆ ರಸುವಾ ಮತ್ತು ಟಿಬೆಟ್ ಗಡಿ ಭಾಗದಲ್ಲಿದ್ದ ಆಪ್ಟಿಕಲ್ ಫೈಬರ್ ಹಾಗೂ ಮೊಬೈಲ್ ಟವರ್‌ಗಳು ಕೊಚ್ಚಿಹೋಗಿವೆ. ಪರಿಣಾಮವಾಗಿ ಹಲವು ಪ್ರದೇಶಗಳಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಸಿಲುಕಿರುವ ಯಾತ್ರಿಕರು ಹಾಗೂ ಸ್ಥಳೀಯರೊಂದಿಗೆ ಸಂಪರ್ಕ ಸಾಧಿಸಲು ನೇಪಾಳ ಸೇನೆಯು ಉಪಗ್ರಹ ಫೋನ್‌ಗಳನ್ನು ಬಳಸುತ್ತಿದೆ. ಸಂಪರ್ಕ ವ್ಯವಸ್ಥೆಯನ್ನು ಶೀಘ್ರವಾಗಿ ಪುನಃಸ್ಥಾಪಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪ್ರಮುಖ ಪ್ರವಾಸಿ ತಾಣಗಳು ಸುರಕ್ಷಿತ

ಪ್ರವಾಹದ ಪರಿಣಾಮ ಮುಖ್ಯವಾಗಿ ಗಡಿ ಕಣಿವೆ ಪ್ರದೇಶಗಳಿಗೆ ಸೀಮಿತವಾಗಿದೆ. ಪೋಖ್ರಾ, ಮೌಂಟ್ ಎವರೆಸ್ಟ್ ವಲಯ ಹಾಗೂ ಕಠ್ಮಂಡು ಕಣಿವೆ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳು ಸುರಕ್ಷಿತವಾಗಿವೆ ಎಂದು ಸಚಿವ ಶಿಶಿರ್ ಖನಾಲ್ ಸ್ಪಷ್ಟಪಡಿಸಿದ್ದಾರೆ.

ಪ್ರವಾಸಿಗರಿಗೆ ನೇಪಾಳಕ್ಕೆ ಬರುವಂತೆ ಮನವಿ

ಪ್ರವಾಸೋದ್ಯಮ ನೇಪಾಳದ ಆರ್ಥಿಕತೆಯ ಪ್ರಮುಖ ಆಧಾರವಾಗಿದ್ದು, ದೇಶದ ಜಿಡಿಪಿಗೆ ಸುಮಾರು 6ರಿಂದ 7ರಷ್ಟು ಕೊಡುಗೆ ನೀಡುತ್ತದೆ. ನೈಸರ್ಗಿಕ ವಿಕೋಪದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದರೆ ದೇಶದ ವಿದೇಶಿ ವಿನಿಮಯ ಮೀಸಲಿನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

2015ರ ಭೀಕರ ಭೂಕಂಪದ ಬಳಿಕ ನೇಪಾಳ ಪುನರ್‌ನಿರ್ಮಾಣಗೊಂಡ ರೀತಿಯಲ್ಲೇ ಈ ಬಾರಿಯೂ ದೇಶ ಚೇತರಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಸಚಿವರು, ಪ್ರವಾಸಿಗರು ನೇಪಾಳ ಪ್ರವಾಸವನ್ನು ರದ್ದುಗೊಳಿಸದೆ ದೇಶದ ಪ್ರವಾಸೋದ್ಯಮಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.