ಮಟ್ಟು ಬೀಚ್‌ನಲ್ಲಿ ಕಡಲ್ಕೊರೆತ ತೀವ್ರ : ತುರ್ತು ಸುರಕ್ಷ ಕಾಮಗಾರಿ ಆರಂಭ

0
11

ಕಾಪು : ತಾಲೂಕು ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಬೀಚ್‌ನಲ್ಲಿ ಕಡಲ್ಕೊರೆತ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಹಾನಿಯನ್ನು ತಡೆಯಲು ತುರ್ತು ಸುರಕ್ಷ ಕಾಮಗಾರಿ ಆರಂಭಿಸಲಾಗಿದೆ.

ಕಳೆದ ಎರಡು ದಿನಗಳಿಂದ ಬೃಹತ್ ಗಾತ್ರದ ಬಂಡೆ ಕಲ್ಲುಗಳನ್ನು ಟಿಪ್ಪರ್‌ಗಳ ಮೂಲಕ ಸ್ಥಳಕ್ಕೆ ಸಾಗಿಸಲಾಗುತ್ತಿದ್ದು, ಜೆಸಿಬಿ ಯಂತ್ರಗಳ ಸಹಾಯದಿಂದ ಕಡಲ ತೀರದಲ್ಲಿ ಕಲ್ಲುಗಳನ್ನು ಹಾಕುವ ಕಾರ್ಯ ನಡೆಯುತ್ತಿದೆ. ಸಮುದ್ರದ ಅಲೆಗಳ ಅಬ್ಬರದಿಂದ ಕರಾವಳಿ ಪ್ರದೇಶಕ್ಕೆ ಮತ್ತಷ್ಟು ಹಾನಿಯಾಗದಂತೆ ತಾತ್ಕಾಲಿಕ ರಕ್ಷಣಾ ಕ್ರಮವಾಗಿ ಈ ಕಾಮಗಾರಿ ಕೈಗೊಳ್ಳಲಾಗಿದೆ.

ಪ್ರಕ್ಷುಬ್ಧಗೊಂಡಿರುವ ಸಮುದ್ರದ ಭಾರಿ ಅಲೆಗಳ ಹೊಡೆತಕ್ಕೆ ಈಗಾಗಲೇ ಮಟ್ಟು ಬೀಚ್‌ ಪ್ರದೇಶದಲ್ಲಿ ಹಲವು ತೆಂಗಿನ ಮರಗಳು, ಸಿಮೆಂಟ್‌ ಬೆಂಚ್‌ಗಳು, ಎತ್ತರದ ಪ್ರದೇಶದ ಕೆಲ ಭಾಗಗಳು ಹಾಗೂ ಬಂಡೆ ಕಲ್ಲುಗಳು ಸಮುದ್ರ ಪಾಲಾಗಿವೆ. ಕಡಲ್ಕೊರೆತದ ತೀವ್ರತೆಯಿಂದ ಅಪಾಯದ ಸ್ಥಿತಿಯಲ್ಲಿದ್ದ ಹೈಮಾಸ್ಟ್‌ ಲೈಟ್‌ ಕಂಬ ಹಾಗೂ ಮೂರು ವಿದ್ಯುತ್‌ ಕಂಬಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ.

ಇದೇ ವೇಳೆ ಕಾಪು–ಮಲ್ಪೆ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮೀನುಗಾರಿಕಾ ರಸ್ತೆಯೂ ಅಪಾಯದ ಸ್ಥಿತಿಗೆ ತಲುಪಿದ್ದು, ಕಡಲ್ಕೊರೆತ ಮುಂದುವರಿದರೆ ರಸ್ತೆಗೂ ಹಾನಿಯಾಗುವ ಆತಂಕ ವ್ಯಕ್ತವಾಗಿದೆ.

ಮಟ್ಟು ಬೀಚ್‌ ಕಡಲ ತೀರದ ಸಂರಕ್ಷಣೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಹಾಗೂ ಕಡಲ್ಕೊರೆತದಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಸ್ಥಳೀಯರ ಹಿತದೃಷ್ಟಿಯಿಂದ ಹಲವು ಬಾರಿ ವರದಿಗಳು ಪ್ರಕಟವಾಗಿದ್ದವು. ಇದೀಗ ಕಡಲ್ಕೊರೆತದ ತೀವ್ರತೆಯನ್ನು ಮನಗಂಡು ತುರ್ತು ಸುರಕ್ಷ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗಿದೆ.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ಮಟ್ಟು ಬೀಚ್‌ ಪ್ರದೇಶದಲ್ಲಿ ತಾತ್ಕಾಲಿಕ ಸುರಕ್ಷ ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಸಲಾಗಿದೆ. ಸ್ಥಳಕ್ಕೆ ಬಂಡೆ ಕಲ್ಲುಗಳನ್ನು ತಂದು ಹಾಕುವ ಮೂಲಕ ಸಮುದ್ರದ ಅಲೆಗಳ ನೇರ ಹೊಡೆತವನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಕುರಿತು ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಪ್ರಸನ್ನ ಕುಮಾರ್‌ ಶೇಟ್‌ ಮಾತನಾಡಿ, ಮಟ್ಟು ಬೀಚ್‌ ಪ್ರದೇಶದಲ್ಲಿ ಕಡಲ್ಕೊರೆತದ ತೀವ್ರತೆಯನ್ನು ಪರಿಗಣಿಸಿ ಸದ್ಯಕ್ಕೆ ತುರ್ತು ಹಾಗೂ ತಾತ್ಕಾಲಿಕ ಸುರಕ್ಷ ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕಡಲ್ಕೊರೆತದ ಪರಿಸ್ಥಿತಿಯನ್ನು ಗಮನಿಸಿ ಅಗತ್ಯವಿರುವ ಶಾಶ್ವತ ರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.