ಅಳದಂಗಡಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಳದಂಗಡಿ, ಶ್ರೀ ಸೋಮನಾಥೇಶ್ವರೀ ಭಜನಾ ಮಂಡಳಿ (ರಿ.) ಅಳದಂಗಡಿ ಹಾಗೂ ವಿಶ್ವ ಹಿಂದೂ ಪರಿಷತ್ ಅಳದಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆಪ್ಟೆಂಬರ್ 14ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಲ್ಲಿ ನಡೆಯಲಿದೆ.
ಭಾದ್ರಪದ ಶುಕ್ಲ ಚೌತಿಯ ಅಂಗವಾಗಿ ಬೆಳಿಗ್ಗೆ 7 ಗಂಟೆಗೆ ಗಣಪತಿ ಪ್ರತಿಷ್ಠೆ ಹಾಗೂ ಗಣಹೋಮ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಯಿಂದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಹಾಗೂ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6 ಗಂಟೆಗೆ ಶ್ರೀ ಸೋಮನಾಥೇಶ್ವರೀ ಮಕ್ಕಳ ಕುಣಿತ ಭಜನಾ ಮಂಡಳಿ ಅಳದಂಗಡಿ ಹಾಗೂ ಶ್ರೀ ಗೋಪಾಲಕೃಷ್ಣ ಮಕ್ಕಳ ಭಜನಾ ಮಂಡಳಿ ಸೂಳಬೆಟ್ಟು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಂಗಳವಾದ್ಯ, ಡೊಳ್ಳು ಕುಣಿತ, ಕೊಂಬು, ಕಹಳೆ ಹಾಗೂ ವಿವಿಧ ವೇಷಭೂಷಣಗಳೊಂದಿಗೆ ಗಣೇಶನ ವಿಗ್ರಹವನ್ನು ಪವಿತ್ರ ಫಲ್ಗುಣಿ ನದಿಯಲ್ಲಿ ವಿಸರ್ಜಿಸಲಾಗುವುದು.
ವಿವಿಧ ಸ್ಪರ್ಧೆಗಳು
ಗಣೇಶೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಗಣೇಶನ ಚಿತ್ರ ಬಿಡಿಸುವುದು, ಸಂಗೀತ ಕುರ್ಚಿ, ಛದ್ಮವೇಷ, ರಸಪ್ರಶ್ನೆ, ಚದುರಂಗ ಹಾಗೂ ಮಡಿಕೆ ಒಡೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮಹಿಳೆಯರಿಗೆ ಹೂ ಹೆಣೆಯುವುದು, ಭಕ್ತಿಗೀತೆ, ಮಡಿಕೆ ಒಡೆಯುವುದು, ಹಗ್ಗಜಗ್ಗಾಟ, ಲಿಂಬೆ-ಚಮಚ, 100 ಮೀ. ಓಟ ಹಾಗೂ ಸಂಗೀತ ಕುರ್ಚಿ ಸ್ಪರ್ಧೆಗಳು ನಡೆಯಲಿವೆ. ಪುರುಷರಿಗೆ ಭಕ್ತಿಗೀತೆ, 100 ಮೀ. ಓಟ, ಹಗ್ಗಜಗ್ಗಾಟ ಹಾಗೂ ಮಡಿಕೆ ಒಡೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಶೇಷವಾಗಿ ಅಡ್ಡ ಜಾರುಕಂಬ ಸ್ಪರ್ಧೆ ಕೂಡ ನಡೆಯಲಿದೆ.
ಎಲ್ಲರಿಗೂ ಕರೋಕೆ ಭಕ್ತಿಗೀತೆ ಸ್ಪರ್ಧೆ ನಡೆಯಲಿದ್ದು, ಇದರ ಪ್ರಾಯೋಜಕತ್ವವನ್ನು ಅಳದಂಗಡಿಯ ಎಸ್.ಎಲ್.ವಿ. ಸೆಂಟರ್‌ನ ರಾಜೇಂದ್ರ ದೇವಾಡಿಗ ವಹಿಸಿದ್ದಾರೆ.
ಅಳದಂಗಡಿ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ತಂಡ ರಚಿಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಬೆಳಿಗ್ಗೆ 10.30 ಗಂಟೆಯೊಳಗೆ ಆಗಮಿಸುವವರಿಗೆ ಮಾತ್ರ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರಲಿದೆ ಎಂದು ಸೂಚಿಸಲಾಗಿದೆ.
ಭಕ್ತರು ಹಾಗೂ ಸಾರ್ವಜನಿಕರು ಗಣೇಶೋತ್ಸವದ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗಣೇಶನ ಅನುಗ್ರಹಕ್ಕೆ ಪಾತ್ರರಾಗುವಂತೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಸೋಮನಾಥೇಶ್ವರೀ ಭಜನಾ ಮಂಡಳಿ ಹಾಗೂ ವಿಶ್ವ ಹಿಂದೂ ಪರಿಷತ್ ಅಳದಂಗಡಿ ವತಿಯಿಂದ ಮನವಿ ಮಾಡಲಾಗಿದೆ.

