ತೀರ್ಥಹಳ್ಳಿ: ವೆಲ್ಡಿಂಗ್ ವರ್ಕ್‌ಶಾಪ್ ಯೂನಿಯನ್, ತೀರ್ಥಹಳ್ಳಿ ತಾಲೂಕು ವತಿಯಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಳೆದ 10 ವರ್ಷಗಳಿಂದ ಯೂನಿಯನ್ ವತಿಯಿಂದ ನಿರಂತರವಾಗಿ ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದು,
ಈ ಬಾರಿ ಯೂನಿಯನ್ ಸದಸ್ಯರಾದ ಪುರುಷೋತ್ತಮ್ ರಾಜ್ ಅವರ ಇಂದಾವರದ ದುರ್ಗಾ ವರ್ಕ್‌ಶಾಪ್‌ನಲ್ಲಿ ಧ್ವಜಾರೋಹಣ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ತಾಲೂಕಿನ ವಿವಿಧ ಭಾಗಗಳಲ್ಲಿರುವ ಯೂನಿಯನ್ ಸದಸ್ಯರ ವರ್ಕ್‌ಶಾಪ್‌ಗಳಲ್ಲಿ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಆಚರಿಸುವ ಮೂಲಕ ಆಯಾ ಭಾಗದ ಸಾರ್ವಜನಿಕರನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದು, ಅವರಲ್ಲಿ ದೇಶಭಕ್ತಿ ಮೂಡಿಸುವುದು ಹಾಗೂ ವೆಲ್ಡಿಂಗ್ ವರ್ಕ್‌ಶಾಪ್ ಯೂನಿಯನ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಅರಿವು ಮೂಡಿಸುವುದು ಸಂಘಟನೆಯ ಪ್ರಮುಖ ಆಶಯವಾಗಿದೆ.
ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸುರೇಶ್, ಕೃಷಿಕರಾದ ಸುಬ್ರಾಯ ನಾಯ್ಕ್, ರುದ್ರ ಪೂಜಾರಿ ಅಸ್ತ್ರ ಒಲೆ ತಯಾರಕರು ಸೇರಿದಂತೆ ಹಿರಿಯ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ, ಮೊನೋ ಆರ್ಟ್ಸ್ ಅಂಡ್ ಇಂಡಸ್ಟ್ರೀಸ್, ಛತ್ರಕೇರಿ, ತೀರ್ಥಹಳ್ಳಿ, “ಯೂನಿಯನ್ ಕಳೆದ 10 ವರ್ಷಗಳಿಂದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸ್ವಚ್ಛ ಭಾರತ್ ಕಾರ್ಯಕ್ರಮ, ಕಾರ್ಮಿಕ ದಿನಾಚರಣೆಯಂದು ರಕ್ತದಾನ ಶಿಬಿರ, ಮಕ್ಕಳ ದಿನಾಚರಣೆಯಂದು ಚಿತ್ರಕಲಾ ಸ್ಪರ್ಧೆ, ಸ್ವಾತಂತ್ರ್ಯ ದಿನಾಚರಣೆಯಂದು ನಿವೃತ್ತ ಸೈನಿಕರು, ಹಿರಿಯ ಕಾರ್ಮಿಕರು ಹಾಗೂ ಗಣ್ಯರಿಗೆ ಗೌರವ ಸನ್ಮಾನ, ಶಾಲಾ ಮಕ್ಕಳಿಗೆ ನೃತ್ಯ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ” ಎಂದರು.
“ನಾವು ದುಡಿದ ಆದಾಯದ ಒಂದು ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಸಮಾಜಕ್ಕೆ ನಮ್ಮದೇ ಆದ ಕೊಡುಗೆ ನೀಡಬೇಕು ಎಂಬುದು ಯೂನಿಯನ್‌ನ ಉದ್ದೇಶವಾಗಿದೆ” ಎಂದು ಮನೋಜ್ ಆಚಾರ್ಯ ತಿಳಿಸಿದರು.
ಗುಣಮಟ್ಟದ ಕೆಲಸದಿಂದ ಉತ್ತಮ ಹೆಸರು ಗಳಿಸಿ: ಸುರೇಶ್
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸುರೇಶ್, ವೆಲ್ಡಿಂಗ್ ವರ್ಕ್‌ಶಾಪ್ ಯೂನಿಯನ್‌ನ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಕಡಿಮೆ ದರಕ್ಕೆ ಕೆಲಸ ಪಡೆಯುವ ಉದ್ದೇಶದಿಂದ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡು ತಮ್ಮ ಹೆಸರು ಹಾಗೂ ವೃತ್ತಿಯ ಗೌರವ ಹಾಳು ಮಾಡಿಕೊಳ್ಳಬಾರದು. ಬದಲಾಗಿ ಉತ್ತಮ ಗುಣಮಟ್ಟದ ಕೆಲಸ ಮಾಡಿ ಗ್ರಾಹಕರ ವಿಶ್ವಾಸದೊಂದಿಗೆ ಉತ್ತಮ ಹೆಸರು ಗಳಿಸಬೇಕು ಎಂದು ಸಲಹೆ ನೀಡಿದರು. ತಮ್ಮ ವೃತ್ತಿಜೀವನದ ಅನುಭವಗಳನ್ನೂ ಅವರು ಹಂಚಿಕೊಂಡರು.
ಸನ್ಮಾನಿತರಾದ ಇತರ ಹಿರಿಯರೂ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡು ಯೂನಿಯನ್‌ನ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯೂನಿಯನ್ ಅಧ್ಯಕ್ಷರಾದ ಮೋಹನ್ ಕೆ ಗಿರಿಮಾಜಿ ವರ್ಕ್ ಶಾಪ್ ಮಾತನಾಡಿ, ಸಂಘವನ್ನು ನೋಂದಣಿ ಮಾಡುವ ಕುರಿತು ಮಾಹಿತಿ ನೀಡಿದರಲ್ಲದೆ, ಸದಸ್ಯರು ಅತೀ ಕಡಿಮೆ ದರಕ್ಕೆ ಕೆಲಸ ಒಪ್ಪಿಕೊಂಡು ಆರ್ಥಿಕ ಸಂಕಷ್ಟ ಹಾಗೂ ಸಾಲದ ಹೊರೆಗೆ ಸಿಲುಕಬಾರದು ಎಂದು ಸಲಹೆ ನೀಡಿದರು. ಸದಸ್ಯರ ಹಿತಕಾಯುವುದೇ ಯೂನಿಯನ್‌ನ ಮುಖ್ಯ ಉದ್ದೇಶವಾಗಿದ್ದು, ಮುಂದೆಯೂ ಸದಸ್ಯರ ಸಮಸ್ಯೆಗಳಿಗೆ ಸಂಘಟನೆ ಸದಾ ಸ್ಪಂದಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಯೂನಿಯನ್ ಉಪಾಧ್ಯಕ್ಷ ನಾರಾಯಣ ಆಚಾರ್, ವಿಶ್ವ ವಿನಾಯಕ ವರ್ಕ್‌ಶಾಪ್ ಕುರುವಳ್ಳಿ, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್ ಭಟ್ ಜೋಯ್ಸ್ ವರ್ಕ್‌ಶಾಪ್, ರಾಘವೇಂದ್ರ ಅಭಿನವ್ ವರ್ಕ್‌ಶಾಪ್, ಖಜಾಂಚಿ ಮಧುಕರ್ ಗುರು ವರ್ಕ್‌ಶಾಪ್, ಸದಸ್ಯರಾದ ಪುರುಷೋತ್ತಮ್ ದುರ್ಗಾ ವರ್ಕ್ ಶಾಪ್ ಇಂದಾವರ, ದಯಾನಂದ ಕೈಮರ, ವೇಣು ಸೇರಿದಂತೆ ಯೂನಿಯನ್ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ರಾಘವೇಂದ್ರ ಕಾಳಿಕಾಂಬಾ ವರ್ಕ್ ಶಾಪ್ ಗುಡ್ಡೆಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಆಗಮಿಸಿದ ಎಲ್ಲರಿಗೂ ಸಿಹಿ ವಿತರಿಸಿ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
Home Uncategorized ವೆಲ್ಡಿಂಗ್ ವರ್ಕ್‌ಶಾಪ್ ಯೂನಿಯನ್‌ನಿಂದ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮದೇಶಭಕ್ತಿ ಜಾಗೃತಿ ಜತೆಗೆ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ —...

