)ಉಜಿರೆ: ಧರ್ಮಸ್ಥಳದಲ್ಲಿ ೫೫ನೇ ವರ್ಷದ ಪುರಾಣ-ಪ್ರವಚನ ಕಾರ್ಯಕ್ರಮವು ಜುಲೈ ೧೬ ರಿಂದ ಸೆಪ್ಟೆಂಬರ್ ೧೭ರ ವರೆಗೆ ನಡೆಯಲಿದೆ. ದೇವಸ್ಥಾನದ ಎದುರು ಇರುವ ಪ್ರವಚನಮಂಟಪದಲ್ಲಿ ಪ್ರತಿದಿನ ಸಂಜೆ ಗಂಟೆ ೬.೩೦ರಿಂದ ೮ ಗಂಟೆ ವರೆಗೆ ಪುರಾಣ ವಾಚನ-ಪ್ರವಚನ ನಡೆಯಲಿದ್ದು, ಖ್ಯಾತ ವಿದ್ವಾಂಸರು ಹಾಗೂ ಕಲಾವಿದರಿಂದ ಕುಮಾರವಾಲ್ಮೀಕಿ ವಿರಚಿತ “ತೊರವೆ ರಾಮಾಯಣ”ದ ವಾಚನ-ಪ್ರವಚನ ನಡೆಸಿಕೊಡುತ್ತಾರೆ.
ಶನಿವಾರ ಮತ್ತು ಭಾನುವಾರಗಳಲ್ಲಿ ವಿವಿಧ ಕಾವ್ಯಗಳ ಆಯ್ದ ಭಾಗಗಳನ್ನು ವಾಚನ-ಪ್ರವಚನಕ್ಕೆ ಬಳಸಲಾಗುವುದು.
ಜುಲೈ ೧೬ ರಂದು ಗುರುವಾರ ಮತ್ತು ೧೭ ರಂದು ಶುಕ್ರವಾರ ಗಣಪತಿ ಭಟ್ ಪದ್ಯಾಣ ವಾಚನಕಾರರಾಗಿಯೂ, ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಪ್ರವಚನಕಾರರಾಗಿಯೂ ಭಾಗವಹಿಸುವರು.
ಉದ್ಘಾಟನಾ ಸಮಾರಂಭ: ಜುಲೈ ೧೬ ರಂದು ಬುಧವಾರ ಸಂಜೆ ೫ ಗಂಟೆಗೆ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಪುರಾಣ ವಾಚನ-ಪ್ರವಚನ ಕಾರ್ಯಕ್ರಮ ಉದ್ಘಾಟಿಸುವರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು ಎಂದು ಪುರಾಣ ವಾಚನ-ಪ್ರವಚನ ಸಮಿತಿಯ ಸಂಚಾಲಕರಾದ ಎ.ವಿ. ಶೆಟ್ಟಿ ತಿಳಿಸಿದ್ದಾರೆ.
