ಶಿಕಾರಿಪುರದಲ್ಲಿ ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘದ 7ನೇ ವಾರ್ಷಿಕ ಮಹಾಸಭೆ

0
4

ಶಿಕಾರಿಪುರ : ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಾಂತಿನಗರ 2ನೇ ಕ್ರಾಸ್‌ನ ಶ್ರೀಕಂತೆ ಸಿದ್ದೇಶ್ವರ ನಿಲಯದ ಶಿಕಾರಿಪುರ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘದ 2025-26ನೇ ಸಾಲಿನ 7ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.

ಸಂಘದ ಅಧ್ಯಕ್ಷರಾದ ನಾಗರಾಜ್ ಜಿಎಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸಿ.ಆರ್. ಪರಶುರಾಮ್ ಚೌಟಗಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ಎಲ್. ಬಸವರಾಜ್ ಭಾಗವಹಿಸಿದ್ದರು.

ಸಂಘದ ನಿರ್ದೇಶಕರಾದ ಬಿ.ಡಿ. ಭೂಕಂತ್, ಬೇಗೂರು ಶಿವಪ್ಪ, ಚನ್ನಬಸಪ್ಪ ಮಾಸ್ಟರ್, ಪ್ರಭಾವತಿ ವೆಂಕಟೇಶ್, ಶಾಂತ, ರೇಣುಕಮ್ಮ, ಚಾಮರಾಜ್, ಕಿರಣ್ ಕಾಂತ್, ಶಿವಮೂರ್ತಪ್ಪ, ಮಲ್ಲಿಕಾರ್ಜುನ ಆಚಾರ್, ವೀರನಗೌಡ, ಶಶಿಧರಯ್ಯ, ಪುಟ್ಟಪ್ಪ, ಹುತ್ತೇಶ್, ಆನಂದ್, ಲಕ್ಷ್ಮಿ ಪಳನಿ ಕುಮಾರ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಲಕ್ಷ್ಮಿ ಪಳನಿ ಕುಮಾರ್ ಅವರ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು. ಸಂಘದ ಕಾರ್ಯದರ್ಶಿ ಯಶೋಧ ದೇವೇಂದ್ರಪ್ಪ ಅವರು ಆಗಮಿಸಿದ ಗಣ್ಯರು ಹಾಗೂ ಸದಸ್ಯರನ್ನು ಸ್ವಾಗತಿಸಿದರು. ವೇದಿಕೆಯಲ್ಲಿದ್ದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭೆಯ ನೋಟಿಸ್ ಅನ್ನು ಎಂ.ಜಿ. ಶಾಂತ ಪ್ರವೀಣ್ ಕುಮಾರ್ ಓದಿ ಮಂಡಿಸಿದರು. ಹಿಂದಿನ ವಾರ್ಷಿಕ ಮಹಾಸಭೆಯ ನಡವಳಿಕೆಯನ್ನು ಮಲ್ಲಿಕಾರ್ಜುನ ಆಚಾರ್ ಮಂಡಿಸಿದರು. ಸಂಘದ ವಾರ್ಷಿಕ ವರದಿಯನ್ನು ಶಶಿಧರಯ್ಯ ಬಿ.ಎಲ್. ಹಾಗೂ ಅಡಿಟ್ ವರದಿಯನ್ನು ನಿರ್ದೇಶಕರಾದ ಎನ್.ಬಿ. ವೀರನಗೌಡರು ಮಂಡಿಸಿದರು. 2026-27ನೇ ಸಾಲಿನ ಅಂದಾಜು ಆಯವ್ಯಯವನ್ನು ಪ್ರಭಾವತಿ ವೆಂಕಟೇಶ್ ಮಂಡಿಸಿದರು. ಮುಂಬರುವ ಸಾಲಿನಲ್ಲಿ ಕೈಗೊಳ್ಳಬೇಕಾದ ಸಂಘದ ವಿವಿಧ ಕಾರ್ಯಚಟುವಟಿಕೆಗಳ ಕಾರ್ಯಕ್ರಮವನ್ನು ಕೆ.ಎಚ್. ಹುತ್ತೇಶ್ ಮಂಡಿಸಿದರು.

ಸಭೆಯಲ್ಲಿ ಸಂಘದ ಲೆಕ್ಕಪತ್ರಗಳು, ವಾರ್ಷಿಕ ವರದಿ ಹಾಗೂ ಮುಂದಿನ ಸಾಲಿನ ಕಾರ್ಯಕ್ರಮಗಳ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಯಿತು. ಸದಸ್ಯರ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಜಾನಪದ ಕಲೆಯ ಬೆಳವಣಿಗೆಗೆ ಕಾರ್ಯಕ್ರಮಗಳನ್ನು ರೂಪಿಸುವುದು ಹಾಗೂ ಸದಸ್ಯರಿಗೆ ಸಂಘದ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಬಗ್ಗೆ ಚರ್ಚಿಸಲಾಯಿತು.

ಜಾನಪದ ಕಲೆ ಉಳಿಸುವ ಸಂಕಲ್ಪ

ಸಂಘದ ಸದಸ್ಯೆ ಜಯಲಕ್ಷ್ಮಿ ಮಾತನಾಡಿ, ಸಂಘದ ಸದಸ್ಯರಿಗಾಗಿ ಪ್ರತ್ಯೇಕ ವಾಟ್ಸಪ್ ಗ್ರೂಪ್ ರಚಿಸಿ, ಸಂಘದ ಮಾಹಿತಿ, ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳನ್ನು ನಿಯಮಿತವಾಗಿ ಸದಸ್ಯರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.

ನಿರ್ದೇಶಕರಾದ ಬೇಗೂರು ಶಿವಪ್ಪ ಮಾತನಾಡಿ, ಜಾನಪದ ಸಾಹಿತ್ಯ ಮತ್ತು ಕಲೆ ನಮ್ಮ ನಾಡಿನ ಅಮೂಲ್ಯ ಪರಂಪರೆಯಾಗಿದ್ದು, ಇಂದಿನ ಕಾಲಘಟ್ಟದಲ್ಲಿ ಅದು ನಶಿಸುವ ಅಪಾಯದಲ್ಲಿದೆ. ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು. ವಾರ್ಷಿಕ ಮಹಾಸಭೆ ಸದಸ್ಯರಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮತ್ತು ಸಂಘದ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲು ದೊರೆಯುವ ಪ್ರಮುಖ ವೇದಿಕೆಯಾಗಿದೆ. ಎಲ್ಲ ಸದಸ್ಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ತಿಳಿಸಿದರು.

ನಿರ್ದೇಶಕಿ ರೇಣುಕಮ್ಮ ಮಾತನಾಡಿ, ಸಂಘದ ಸದಸ್ಯರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವುದರ ಜೊತೆಗೆ ಅವರ ಮಕ್ಕಳಿಗೂ ಜಾನಪದ ಕಲೆಯ ತರಬೇತಿ ನೀಡುವಂತಾಗಬೇಕು. ಸಂಘದಿಂದ ದೊರೆಯುವ ಸೌಲಭ್ಯ ಹಾಗೂ ಅವಕಾಶಗಳ ಕುರಿತು ಸದಸ್ಯರು ಮಾಹಿತಿ ಪಡೆದು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಜಾನಪದ ಕಲಾ ಮೇಳಕ್ಕೆ ಒತ್ತು

ಮುಖ್ಯ ಅತಿಥಿ ಡಿ.ಎಲ್. ಬಸವರಾಜ್ ಮಾತನಾಡಿ, ಸಂಘದಲ್ಲಿ ಆರ್ಥಿಕ ವ್ಯವಹಾರಗಳು ಕಡಿಮೆ ಇರುವ ಹಿನ್ನೆಲೆಯಲ್ಲಿ ಸಂಘವು ನಷ್ಟದಲ್ಲಿದೆ. ಸಂಘದ ವತಿಯಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಿ ಚಟುವಟಿಕೆಗಳನ್ನು ಹೆಚ್ಚಿಸಬೇಕು. ಅಗತ್ಯವಿರುವ ಸಹಕಾರವನ್ನು ನೀಡಲು ತಾವು ಸಿದ್ಧರಿರುವುದಾಗಿ ತಿಳಿಸಿದರು.

ಉಪಾಧ್ಯಕ್ಷರಾದ ಸಿ.ಆರ್. ಪರಶುರಾಮ್ ಚೌಟಗಿ ಮಾತನಾಡಿ, ಜಾನಪದ ಸಂಘದ ವತಿಯಿಂದ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸಂಘದ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು. ಶೇರುಗಳನ್ನು ಪಡೆದು ಸದಸ್ಯತ್ವವನ್ನು ಬಲಪಡಿಸುವ ಮೂಲಕ ಜಾನಪದ ಕಲಾವಿದರ ಸಹಕಾರ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಡಾ. ಬಿ.ಡಿ. ಭೂಕಂತ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಜಾತ್ರೆ, ಜಾನಪದ ಕಲಾ ಮೇಳ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ. ಮಹಿಳಾ ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಈಸೂರು ಗ್ರಾಮದ ಭಜನಾ ಮಂಡಳಿಯವರಿಂದ ಜಾನಪದ ಕಲಾ ಮೇಳ ಆಯೋಜಿಸಿ ಅವರನ್ನು ಸನ್ಮಾನಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ನಶಿಸುತ್ತಿರುವ ಜಾನಪದ ಕಲೆಯನ್ನು ಮತ್ತೆ ಮುನ್ನೆಲೆಗೆ ತರಲು ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಅವರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಬೇಕು. ಯಕ್ಷಗಾನ, ಭಜನೆ, ಭರತನಾಟ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ತರಬೇತಿಯನ್ನು ನೀಡುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಬೇಕು ಎಂದು ಅವರು ಸಲಹೆ ನೀಡಿದರು.

ನಿರ್ದೇಶಕಿ ಪ್ರಭಾವತಿ ವೆಂಕಟೇಶ್ ಮಾತನಾಡಿ, ಸಂಘದ ವತಿಯಿಂದ ರೂಪಿಸುವ ಎಲ್ಲ ಕಾರ್ಯಕ್ರಮಗಳಿಗೆ ತಮ್ಮ ಸಂಪೂರ್ಣ ಸಹಕಾರವಿದ್ದು, ಕಾರ್ಯಕ್ರಮಗಳನ್ನು ರೂಪಿಸಿದರೆ ಅವುಗಳನ್ನು ಅನುಷ್ಠಾನಗೊಳಿಸಲು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಬೇಸಿಗೆ ಶಿಬಿರ, ಭರತನಾಟ್ಯ ತರಬೇತಿ ಸೇರಿದಂತೆ ಹಲವು ಕಾರ್ಯಕ್ರಮ

ಸಂಘದ ಅಧ್ಯಕ್ಷ ನಾಗರಾಜ್ ಜಿಎಂ ಮಾತನಾಡಿ, ಸಂಘವು ಆರ್ಥಿಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಸಂಘದ ಉದ್ದೇಶ ಜಾನಪದ ಕಲೆ ಮತ್ತು ಕಲಾವಿದರ ಅಭಿವೃದ್ಧಿಯಾಗಿದ್ದು, ಆರ್ಥಿಕ ವ್ಯವಹಾರಗಳಿಗೆ ಹೆಚ್ಚಿನ ಅವಕಾಶವಿಲ್ಲದ ಕಾರಣ ಸಂಘ ನಷ್ಟದಲ್ಲಿದೆ. ಹಿರಿಯ ಗಣ್ಯರು ಹಾಗೂ ನಿರ್ದೇಶಕರ ಮಾರ್ಗದರ್ಶನ ಪಡೆದು ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸದಸ್ಯರು ಸಂಘಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಂಘದ ವತಿಯಿಂದ ಈಗಾಗಲೇ ಬೇಸಿಗೆ ಶಿಬಿರ, ಭರತನಾಟ್ಯ ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಜಾನಪದ ಜಾತ್ರೆ, ಜಾನಪದ ಕಲಾ ಮೇಳ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ಅವರು ತಿಳಿಸಿದರು.

ಶಿಕ್ಷಕರಿಗೆ ಗೌರವ

ಕಾರ್ಯಕ್ರಮದ ಅಂಗವಾಗಿ ಸಂಘದ ನಿರ್ದೇಶಕರು ಹಾಗೂ ಸದಸ್ಯರಾಗಿರುವ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಬಿ.ಡಿ. ಭೂಕಂತ್ ಅವರು “ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ” ಎಂಬ ಮಾತಿನಂತೆ ಗುರುಗಳು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಮೂಲ್ಯವಾದ ಜ್ಞಾನ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶಿಕ್ಷಕರ ಸೇವೆಯನ್ನು ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದು ಹೇಳಿದರು.

ಸಭೆಯ ವಿವಿಧ ವಿಚಾರಗಳ ಕುರಿತು ಸದಸ್ಯರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಜಾನಪದ ಕಲೆಯ ಸಂರಕ್ಷಣೆ, ಕಲಾವಿದರಿಗೆ ಪ್ರೋತ್ಸಾಹ, ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಹಾಗೂ ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು.

ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ವಾರ್ಷಿಕ ಮಹಾಸಭೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು.