ಕಾಪುವಿನಲ್ಲಿ ಸೆ.9ರಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 8ನೇ ಶಾಖೆ ಉದ್ಘಾಟನೆ

0
25

ಕಾಪು : ಪೆರ್ಡೂರು ಕೇಂದ್ರ ಕಚೇರಿಯನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ (ನಿ.) ಇದರ 8ನೇ ಶಾಖೆಯ ಶುಭಾರಂಭ ಸಮಾರಂಭ ಸೆಪ್ಟೆಂಬರ್ 9ರಂದು ಬೆಳಗ್ಗೆ 10 ಗಂಟೆಗೆ ಕಾಪುವಿನ ಶ್ರೀ ನಾರಾಯಣಗುರು ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಹವಾನಿಯಂತ್ರಿತ ಶಾಖೆಯಾಗಿ ಕಾಪು ಶಾಖೆ ಆರಂಭಗೊಳ್ಳಲಿದೆ. ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗದ ಮುಖ್ಯರಸ್ತೆಯಲ್ಲಿರುವ ಶ್ರೀ ನಾರಾಯಣಗುರು ಕಾಂಪ್ಲೆಕ್ಸ್‌ನಲ್ಲಿ ಶಾಖೆ ಕಾರ್ಯಾರಂಭ ಮಾಡಲಿದೆ.

ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಕರ್ನಾಟಕ ಸರ್ಕಾರದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಸಂತೋಷ ಕುಲಾಲ್ ಪಕ್ಕಾಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾಪು ಬಿಲ್ಲವರ ಸಹಾಯಕರ ಸಂಘದ ಅಧ್ಯಕ್ಷ ವಿಕ್ರಮ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಲಾವಣ್ಯ ಕೆ.ಆರ್. ಹಾಗೂ ಕುಲಾಲ ಸಂಘ (ರಿ.) ಕಾಪು ಅಧ್ಯಕ್ಷ ಹರೀಶ್ ಕುಲಾಲ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

1958ರಲ್ಲಿ ಸ್ಥಾಪನೆಯಾದ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ಪೆರ್ಡೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಪೆರ್ಡೂರು, ಉಡುಪಿ, ಬ್ರಹ್ಮಾವರ, ಕುಂದಾಪುರ, ಶಿರ್ವ–ಮಂಚಕಲ್, ಸಿದ್ದಾಪುರ ಹಾಗೂ ಹೆಬ್ರಿಯಲ್ಲಿ ಶಾಖೆಗಳನ್ನು ಹೊಂದಿದೆ. ಇದೀಗ ಕಾಪುವಿನಲ್ಲಿ 8ನೇ ಶಾಖೆ ಆರಂಭಗೊಳ್ಳುತ್ತಿದೆ.

ಸಂಸ್ಥೆಯು ರಾಜ್ಯ ಮಟ್ಟದ ಅಮೃತಮ ಸಹಕಾರ ಸಂಘ ಪ್ರಶಸ್ತಿ 2017–18 ಹಾಗೂ ರಾಜ್ಯ ಮಟ್ಟದ ಉತ್ತಮ ಪತ್ತಿನ ಸಹಕಾರ ಸಂಘ ಪ್ರಶಸ್ತಿ 2025–26 ಸೇರಿದಂತೆ ವಿವಿಧ ಗೌರವಗಳಿಗೆ ಪಾತ್ರವಾಗಿದೆ.

ಸಂಸ್ಥೆಯ ಉಪಾಧ್ಯಕ್ಷರು, ನಿರ್ದೇಶಕ ಮಂಡಳಿ ಸದಸ್ಯರು, ಸಲಹಾ ಸಮಿತಿ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ.

ಕಾಪು ಶಾಖೆಯ ಶುಭಾರಂಭ ಸಮಾರಂಭಕ್ಕೆ ಸಾರ್ವಜನಿಕರು, ಗ್ರಾಹಕರು ಹಾಗೂ ಸಹಕಾರ ಕ್ಷೇತ್ರದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಸ್ಥೆಯ ಅಧ್ಯಕ್ಷ ಸಂತೋಷ ಕುಲಾಲ್ ಪಕ್ಕಾಲ್ ಹಾಗೂ ನಿರ್ದೇಶಕ ಮಂಡಳಿ ಮನವಿ ಮಾಡಿದೆ.