ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಒತ್ತುವರಿ ಮಾಡಿದರೆ ಕ್ರಿಮಿನಲ್ ಕೇಸ್ : ಈಶ್ವರ ಖಂಡ್ರೆ ಎಚ್ಚರಿಕೆ

0
11

ಬೆಂಗಳೂರು : ಗ್ರಾಮ ಪಂಚಾಯಿತಿಗೆ ಸೇರಿದ ಹಾಗೂ ಪಂಚಾಯಿತಿ ವತಿಯಿಂದ ನಿರ್ವಹಿಸಲಾಗುತ್ತಿರುವ ಯಾವುದೇ ಕೆರೆಯನ್ನು ಒತ್ತುವರಿ ಮಾಡಿರುವುದು ಕಂಡುಬಂದರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಒತ್ತುವರಿ ತೆರವುಗೊಳಿಸುವುದರ ಜೊತೆಗೆ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ದೇಶದಲ್ಲೇ ಎರಡನೇ ಅತಿ ಹೆಚ್ಚು ಬರಡು ಭೂಮಿ ಹೊಂದಿರುವ ರಾಜ್ಯವಾಗಿದ್ದು, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವುದು ದೊಡ್ಡ ಸವಾಲಾಗಿದೆ ಎಂದರು. ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮೇಲ್ಮೈ ಜಲಮೂಲಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಜಲಶಕ್ತಿ ಸಚಿವಾಲಯವು ದೆಹಲಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಸುಸ್ಥಿರ ಜಲ ಕುರಿತ ಇಲಾಖಾ ಶೃಂಗಸಭೆಯಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ ಸಚಿವರು, ಪ್ರಧಾನಮಂತ್ರಿಯವರ ಸಮ್ಮುಖದಲ್ಲಿ ರಾಜ್ಯ ಸರ್ಕಾರ ಜಲ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿರುವುದಾಗಿ ಹೇಳಿದರು.

ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಭೂಮಿಯೊಳಗೆ ಹೆಬ್ಬಂಡೆಗಳು ಹಾಗೂ ಲ್ಯಾಟರೈಟ್ ಪದರಗಳಿರುವುದರಿಂದ ಮಳೆ ನೀರು ಸಮರ್ಪಕವಾಗಿ ಇಂಗದೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರ ಜೊತೆಗೆ ಅತಿಯಾದ ಅಂತರ್ಜಲ ಬಳಕೆಯೂ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ವಿವರಿಸಿದರು.

ಮುಂದಿನ ದಿನಗಳಲ್ಲಿ ಕೆರೆ, ಕಟ್ಟೆ, ಸರೋವರ ಹಾಗೂ ನದಿಗಳಂತಹ ಮೇಲ್ಮೈ ಜಲಮೂಲಗಳೇ ಪ್ರಮುಖ ಜೀವನಾಧಾರವಾಗಲಿವೆ. ಜಲಮೂಲಗಳನ್ನು ಸಂರಕ್ಷಿಸದಿದ್ದರೆ ಭವಿಷ್ಯದಲ್ಲಿ ತೀವ್ರ ಜಲಕ್ಷಾಮ ಎದುರಾಗುವ ಸಾಧ್ಯತೆ ಇದೆ ಎಂದು ಸಚಿವರು ಎಚ್ಚರಿಸಿದರು.

ಭೂಮಿಯಲ್ಲಿರುವ ಒಟ್ಟು ನೀರಿನ ಪ್ರಮಾಣದಲ್ಲಿ ಕುಡಿಯಲು ಯೋಗ್ಯವಾದ ನೀರು ಅತ್ಯಂತ ಸೀಮಿತವಾಗಿದೆ. ಹೀಗಾಗಿ ಲಭ್ಯವಿರುವ ಜಲಮೂಲಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕೆರೆ, ಸರೋವರ ಹಾಗೂ ನದಿಗಳಿಗೆ ತ್ಯಾಜ್ಯ ಸೇರ್ಪಡೆಯಾಗದಂತೆ ಮತ್ತು ಅವುಗಳ ಒತ್ತುವರಿ ನಡೆಯದಂತೆ ರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ರೂಪಿಸುವಂತೆ ಶೃಂಗಸಭೆಯಲ್ಲಿ ಪ್ರಧಾನಮಂತ್ರಿಯವರ ಸಮ್ಮುಖದಲ್ಲೇ ಒತ್ತಾಯಿಸಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.

11,498 ಕೆರೆಗಳು ಒತ್ತುವರಿ

ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 32,504 ಕೆರೆಗಳಿದ್ದು, ಈ ಪೈಕಿ 11,498 ಕೆರೆಗಳು ಒತ್ತುವರಿಯಾಗಿದ್ದವು. ಈಗಾಗಲೇ 6,670 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 4,828 ಕೆರೆಗಳ ಸುಮಾರು 11,671 ಎಕರೆ ಪ್ರದೇಶದ ಒತ್ತುವರಿ ತೆರವುಗೊಳಿಸಬೇಕಿದೆ ಎಂದು ಸಚಿವರು ಮಾಹಿತಿ ನೀಡಿದರು.

ಉಳಿದ ಕೆರೆಗಳ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗೆ ತಕ್ಷಣ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಹೊಸದಾಗಿ ಯಾರಾದರೂ ಕೆರೆ ಒತ್ತುವರಿ ಮಾಡುವುದು ಕಂಡುಬಂದರೆ, ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

26,589 ಹಳ್ಳಿಗಳಿಗೆ ಕುಡಿಯುವ ನೀರು

ರಾಜ್ಯದ 26,589 ಹಳ್ಳಿಗಳಲ್ಲಿ ಸುಮಾರು 4.45 ಕೋಟಿ ಜನರು ವಾಸಿಸುತ್ತಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಿನವರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವುದರಿಂದ ಅವರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಸರ್ಕಾರದ ಪ್ರಮುಖ ಸವಾಲಾಗಿದೆ ಎಂದರು.

ಮುಂದಿನ 30 ವರ್ಷಗಳಲ್ಲಿ ಹೆಚ್ಚಾಗಲಿರುವ ಜನಸಂಖ್ಯೆಯನ್ನೂ ಗಮನದಲ್ಲಿಟ್ಟುಕೊಂಡು ಏಕಗ್ರಾಮ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮೇಲ್ಮೈ ಜಲದ ಗುಣಮಟ್ಟ ಪರೀಕ್ಷೆಗಾಗಿ 1.51 ಲಕ್ಷ ಮಹಿಳೆಯರಿಗೆ ತರಬೇತಿ ನೀಡಿ ಕ್ಷೇತ್ರೀಯ ಪರೀಕ್ಷಾ ಕಿಟ್‌ಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ದೇಶದಲ್ಲೇ ಮೊದಲ ವಾಟರ್ ಬಜೆಟಿಂಗ್

ನೀರಿನ ಲಭ್ಯತೆ ಹಾಗೂ ಬೇಡಿಕೆಯನ್ನು ವೈಜ್ಞಾನಿಕವಾಗಿ ಅಂದಾಜಿಸಿ ಯೋಜನೆ ರೂಪಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ವಾಟರ್ ಬಜೆಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ದೇಶದಲ್ಲೇ ವಾಟರ್ ಬಜೆಟಿಂಗ್ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ಸಚಿವರು ಹೇಳಿದರು.

ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಪ್ರಸ್ತುತ ಬೇಡಿಕೆ ಹಾಗೂ ಭವಿಷ್ಯದ ಬೇಡಿಕೆಯನ್ನು ಲೆಕ್ಕಹಾಕಿ ಸಮತೋಲಿತ ನೀರು ಪೂರೈಕೆಗೆ ವೈಜ್ಞಾನಿಕ ಮತ್ತು ವ್ಯವಸ್ಥಿತ ಯೋಜನೆ ರೂಪಿಸಲು ಇದರಿಂದ ಸಹಕಾರಿಯಾಗಲಿದೆ ಎಂದರು.

ರಾಜ್ಯದ 268 ಹಳ್ಳಿಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಗೆ ತರಲಾಗಿದ್ದು, ಇದರಿಂದ ಕುಡಿಯುವ ನೀರಿನ ಬಳಕೆಯಲ್ಲಿ ಶೇ.7ರಷ್ಟು ಹಾಗೂ ನೀರು ಪಂಪ್ ಮಾಡಲು ಬಳಸುವ ವಿದ್ಯುತ್ ಅವಧಿಯಲ್ಲಿ ಶೇ.12ರಷ್ಟು ಉಳಿತಾಯವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಜಿಲ್ಲಾ ನೀರು ಮತ್ತು ನೈರ್ಮಲ್ಯ ಅಭಿಯಾನದಡಿ ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, ಗ್ರಾಮೀಣ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.