ದಕ್ಷಿಣ ಕನ್ನಡ: ಭಾರತದ ಮದ್ಯ ತಯಾರಿಕಾ ಉದ್ಯಮ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಕಂಪನಿಗಳು ತೀವ್ರ ನಷ್ಟ ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ, ದೇಶದ ಎರಡು ಪ್ರಮುಖ ಮದ್ಯ ತಯಾರಿಕಾ ಸಂಘಟನೆಗಳು ಶೇ. 15ರಷ್ಟು ಬೆಲೆ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಅಧಿಕೃತವಾಗಿ ಮನವಿ ಮಾಡಿವೆ.
ಭಾರತದ ಮದ್ಯ ತಯಾರಿಕಾ ಕಂಪನಿಗಳ ಒಕ್ಕೂಟವಾದ ‘ಕಾನ್ಫೆಡರೇಶನ್ ಆಫ್ ಇಂಡಿಯನ್ ಆಲ್ಕೊಹಾಲಿಕ್ ಬೆವರೇಜ್ ಕಂಪನೀಸ್’ (CIABC), ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು, ಭಾರತದಲ್ಲೇ ತಯಾರಾದ ವಿದೇಶಿ ಮದ್ಯ (IMFL) ಉತ್ಪನ್ನಗಳ ಬೆಲೆ ಪರಿಷ್ಕರಿಸುವಂತೆ ಕೇಳಿದೆ. ಉತ್ಪನ್ನದ ಮಾದರಿ ಮತ್ತು ಬಾಟಲಿಯ ತೂಕವನ್ನು ಆಧರಿಸಿ, 9 ಲೀಟರ್ನ ಒಂದು ಕೇಸ್ ಮೇಲೆ 100 ರಿಂದ 150 ರೂಪಾಯಿಗಳವರೆಗೆ ಬೆಲೆ ಏರಿಕೆ ಮಾಡಲು ಒಕ್ಕೂಟವು ಅವಕಾಶ ಕೇಳಿದೆ. ಈ ಬಗ್ಗೆ ANI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ CIABCಯ ಮಹಾನಿರ್ದೇಶಕ ಅನಂತ್ ಎಸ್. ಅಯ್ಯರ್, “ಉತ್ಪನ್ನದ ವಿಭಾಗಕ್ಕೆ ಅನುಗುಣವಾಗಿ ನಾವು ಪ್ರತಿ ಕೇಸ್ಗೆ 100 ರಿಂದ 150 ರೂಪಾಯಿಗಳವರೆಗೆ ಬೆಲೆ ಏರಿಕೆ ಬಯಸುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಯುನೈಟೆಡ್ ಬ್ರೂವರೀಸ್ (ಹೈನೆಕೆನ್ ಕಂಪನಿ), ಎಬಿ ಇನ್ಬೆವ್ ಮತ್ತು ಕಾರ್ಲ್ಸ್ಬರ್ಗ್ನಂತಹ ದೈತ್ಯ ಬಿಯರ್ ಕಂಪನಿಗಳನ್ನು ಪ್ರತಿನಿಧಿಸುವ ‘ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ (BAI) ಕೂಡ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದೆ. ಬಿಯರ್ ಬೆಲೆಯನ್ನು ಪ್ರತಿ ಕೇಸ್ಗೆ (12 ಬಾಟಲ್, 650 ಮಿ.ಲೀ.) 25-30 ರೂಪಾಯಿ ಹೆಚ್ಚಿಸಲು ಸಂಘಟನೆ ಒತ್ತಾಯಿಸಿದೆ. BAIನ ಮಹಾನಿರ್ದೇಶಕ ವಿನೋದ್ ಗಿರಿ ಅವರು ಉದ್ಯಮದ ಆರ್ಥಿಕ ಸಂಕಷ್ಟವನ್ನು ವಿವರಿಸಿದ್ದಾರೆ. “ಇವತ್ತು ಹಲವು ರಾಜ್ಯಗಳಲ್ಲಿ ಬಿಯರ್ ಕಂಪನಿಗಳು ನಷ್ಟದಲ್ಲಿವೆ. ಬೆಲೆ ಏರಿಸದಿದ್ದರೆ ಅವು ಉಳಿಯುವುದೇ ಇಲ್ಲ” ಎಂದು ಅವರು ಎಚ್ಚರಿಸಿದ್ದಾರೆ. ಈ ಹೊರೆಯನ್ನು ಕೇವಲ ಉದ್ಯಮದ ಮೇಲೆ ಹಾಕದೆ, ಸರ್ಕಾರ ಮತ್ತು ಗ್ರಾಹಕರು ಕೂಡ ಹಂಚಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

