ಲಯನ್ಸ್ ಕ್ಲಬ್ ಬೆಳ್ಮಣ್ ವತಿಯಿಂದ ವಿಶ್ವಶಾಂತಿ ಚಿತ್ರ ಸ್ಪರ್ಧೆ

0
2

ಬೆಳ್ಮಣ್: ಲಯನ್ಸ್ ಕ್ಲಬ್ ಬೆಳ್ಮಣ್ ವತಿಯಿಂದ ಕಲರ್ ಆರ್ಟ್ ಎಜುಕೇಷನ್‌ನ ಡ್ರಾಯಿಂಗ್ ವಿದ್ಯಾರ್ಥಿಗಳಿಗಾಗಿ ‘ಮಾನವೀಯತೆಯಲ್ಲಿ ಸಾಮರಸ್ಯ’ ಎಂಬ ವಿಷಯದಡಿ ಜಾಗತಿಕ ಶಾಂತಿ ಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್ಬಿನ ಕಾರ್ಯದರ್ಶಿ ಲಯನ್ ಟೀನಾ ಡೆಸಾ ಅವರು ಸ್ಪರ್ಧೆಯ ಉದ್ದೇಶ, ಮಕ್ಕಳ ಭವಿಷ್ಯದಲ್ಲಿ ಸೃಜನಶೀಲತೆಯ ಮಹತ್ವ, ಶಾಂತಿ ಹಾಗೂ ಸೌಹಾರ್ದತೆಯ ಅಗತ್ಯತೆ ಮತ್ತು ಸ್ಪರ್ಧೆಯ ನಿಯಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ಲಯನ್ ಬಿ. ಎಚ್. ಶಿವರಾಮ ಆಚಾರ್ಯ ಹಾಗೂ ಕಲರ್ ಆರ್ಟ್ ಎಜುಕೇಷನ್ ಸಂಸ್ಥೆಯ ಮುಖ್ಯಸ್ಥರಾದ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ವಿತರಿಸಲಾಯಿತು. ಇದೇ ವೇಳೆ ಕಾರ್ಯದರ್ಶಿ ಲಯನ್ ಟೀನಾ ಡೆಸಾ ಅವರು ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಿ ಪ್ರೋತ್ಸಾಹಿಸಿದರು. ಮಕ್ಕಳಲ್ಲಿ ಚಿತ್ರಕಲೆಯ ಆಸಕ್ತಿ ಬೆಳೆಸುವುದರ ಜೊತೆಗೆ ವಿಶ್ವಶಾಂತಿ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.