ತುಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಮಾತೃಮೂಲ ಪರಂಪರೆಯ ಪುನರುಜ್ಜೀವನಕ್ಕಾಗಿ ಆಯೋಜಿಸಲಾಗುತ್ತಿರುವ ಮಹತ್ವದ “ಅಪ್ಪೆ ಬೇರ್ ದ ತುಳುನಾಡ್” ಕಾರ್ಯಕ್ರಮಕ್ಕೆ ಖ್ಯಾತ ಲೇಖಕಿ ಹಾಗೂ ಜಾನಪದ ತಜ್ಞೆ ಡಾ. ಇಂದಿರಾ ಹೆಗ್ಗಡೆ ಅವರನ್ನು ಸಮ್ಮೇಳನ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ.
ಡಾ. ಇಂದಿರಾ ಹೆಗ್ಗಡೆ ಅವರು ತುಳುನಾಡಿನ ಜಾನಪದ, ಆಚರಣೆಗಳು, ನಂಬಿಕೆಗಳು ಮತ್ತು ಸಂಸ್ಕೃತಿಯ ಕುರಿತಾಗಿ ದೀರ್ಘಕಾಲದಿಂದ ಆಳವಾದ ಅಧ್ಯಯನ ನಡೆಸುತ್ತಿರುವ ಪ್ರಮುಖ ವಿದ್ವಾಂಸರು. ಕಿನ್ನಿಗೋಳಿ ಮೂಲದ ಅವರು ತುಳು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಅವರು ರಚಿಸಿರುವ ಕೃತಿಗಳಲ್ಲಿ “ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ”, “ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ”, “ಸಿರಿಬಾರಿ ಲೋಕ ತುಳು ನಾಡು”, “ಕರಾವಳಿ ಸಂಸ್ಕೃತಿ ಸಮೀಕ್ಷೆ” ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ಮೊದಲಾದ ಗ್ರಂಥಗಳು ತುಳುನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ಜೀವನದ ಅಧ್ಯಯನಕ್ಕೆ ಮಹತ್ವದ ಆಧಾರವಾಗಿವೆ.
ತುಳುನಾಡಿನ ನಾಗಾರಾಧನೆ, ಭೂತಾರಾಧನೆ, ದೈವಾರಾಧನೆ, ಕುಟುಂಬ ವ್ಯವಸ್ಥೆ, ಸಮಾಜ ವ್ಯವಸ್ಥೆ, ಜಾನಪದ ಆಚರಣೆಗಳು ಮತ್ತು ಪರಂಪರೆಗಳ ಕುರಿತು ಅವರು ನಡೆಸಿದ ಅಧ್ಯಯನಗಳು ಇಂದಿಗೂ ಅನೇಕ ಸಂಶೋಧನೆಗಳಿಗೆ ಮಾರ್ಗದರ್ಶಕವಾಗಿವೆ. ವಿಶೇಷವಾಗಿ, ತುಳುವರ ಮೂಲತತ್ವ ಮತ್ತು ಪರಂಪರೆಗಳನ್ನು ಆಳವಾಗಿ ವಿಶ್ಲೇಷಿಸಿದ ಅವರ ಡಾಕ್ಟರೇಟ್ ಅಧ್ಯಯನವು ಅತ್ಯಂತ ಮಹತ್ವದ್ದಾಗಿದೆ.
ಡಾ. ಇಂದಿರಾ ಹೆಗ್ಗಡೆ ಅವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಜಾನಪದ ತಜ್ಞೆಯಾಗಿ ಅವರ ಸೇವೆ ಅಪಾರವಾಗಿದೆ. ಅವರು ಸ್ಥಾಪಿಸಿದ ಚೇಳ್ಯಾರುಗುತ್ತು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಪುಸ್ತಕ ದಾನ ಹಾಗೂ ಸಂಸ್ಕೃತಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ತುಳುವ ಮಹಾಸಭೆ ಇಂಟರ್ನ್ಯಾಷನಲ್ ಮುಲ್ಕಿ ತಾಲೂಕು ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಅಲಯನ್ಸ್ ಯುನಿವರ್ಸಿಟಿ ಬೆಂಗಳೂರು ಮತ್ತು ಬಂಟ್ಸ್ ಸಂಘ ಮುಲ್ಕಿ ಸಹಭಾಗಿತ್ವ ವಹಿಸಿಕೊಂಡಿದೆ. 2026 ಮೇ 24ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ “ಅಪ್ಪೆ ಬೇರ್ ದ ತುಳುನಾಡ್” ಕಾರ್ಯಕ್ರಮವು ತುಳು ಭಾಷೆ, ಕಲೆ, ಸಂಸ್ಕೃತಿ ಮತ್ತು ಮಾತೃಮೂಲ ಪರಂಪರೆಯ ಉಳಿವು ಮತ್ತು ಅಭಿವೃದ್ಧಿಗೆ ವೇದಿಕೆಯಾಗಿದ್ದು, ತುಳುನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ಸಂಶೋಧಕರು, ಕಲಾವಿದರು ಹಾಗೂ ಯುವಜನರು ಭಾಗವಹಿಸಲಿದ್ದಾರೆ. ಬಿಲ್ಲವ ಮಹಿಳಾ ಮಹಾಮಂಡಳಿ ಮುಲ್ಕಿ, ಲಯನ್ಸ್ ಕ್ಲಬ್ ಮುಲ್ಕಿ, ರೋಟರಿ ಇಂಟರ್ನ್ಯಾಷನಲ್ ಮುಲ್ಕಿ ಮೊದಲಾದ ಸಂಘ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ.
ಡಾ. ಇಂದಿರಾ ಹೆಗ್ಗಡೆ ಅವರಂತಹ ಅನುಭವಸಂಪನ್ನ ವ್ಯಕ್ತಿತ್ವ ಸಮ್ಮೇಳನ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ರಾಷ್ಟ್ರೀಯ ವಿಚಾರ ಸಂಕೀರ್ಣಕ್ಕೆ ಘನತೆ ಹೆಚ್ಚಿಸಿದೆ. ಅವರ ಮಾರ್ಗದರ್ಶನದಲ್ಲಿ ಈ ಸಮ್ಮೇಳನವು ತುಳುನಾಡಿನ ಸಾಂಸ್ಕೃತಿಕ ಚಿಂತನೆಗೆ ಹೊಸ ದಿಕ್ಕು ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ತುಳು ಸಂಸ್ಕೃತಿಯ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ಜೀವನವನ್ನೇ ಅರ್ಪಿಸಿದ ಮಹಾನ್ ವ್ಯಕ್ತಿತ್ವವನ್ನು ಸಮ್ಮೇಳನ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ.
“ಅಪ್ಪೆ ಬೇರ್ ದ ತುಳುನಾಡ್” ಎಂಬ ಪರಿಕಲ್ಪನೆ ಕುರಿತು ಮಾತನಾಡಿದ ಡಾ. ಇಂದಿರಾ ಹೆಗ್ಗಡೆ ಅವರು,
“ಅಪ್ಪೆ ಬೇರು ಎಂಬುದು ಪ್ರಾಕೃತಿಕ ಪರಿಕಲ್ಪನೆ. ತಾಯಿ ಬೇರಿನಿಂದಾಗಿ ಒಂದು ಮರ ಉಳಿಯುತ್ತದೆ. ಆ ಮರವು ಪ್ರಾಣಿ ಪಕ್ಷಿಗಳು ಸೇರಿದಂತೆ ಎಲ್ಲರಿಗೂ ಆಶ್ರಯ ನೀಡುತ್ತದೆ. ತಾಯಿ ಬೇರು ಇಲ್ಲದಿದ್ದರೆ ಒಂದು ಮರ ನಾಶವಾಗುತ್ತದೆ. ಅದೇ ರೀತಿ ಮಾತೃಮೂಲ ಸಂಸ್ಕೃತಿಯ ತುಳು ನಾಡಿನ ಪದ್ಧತಿಗಳು ಉಳಿಯಬೇಕಾದದ್ದು ಅನಿವಾರ್ಯ. ಈ ದಿಶೆಯಲ್ಲಿ ಈ ರಾಷ್ಟ್ರೀಯ ವಿಚಾರ ಸಂಕೀರ್ಣ ತುಂಬಾ ಮಹತ್ತರವಾದದ್ದು. ನನ್ನನ್ನು ಸಮ್ಮೇಳನ ಅಧ್ಯಕ್ಷೆಯಾಗಿ ಆಯ್ಕೆ ಮಾಡಿರುವುದು ನನಗೆ ಹೆಮ್ಮೆ ಮತ್ತು ಸಂತೋಷ ತಂದಿದೆ,” ಎಂದು ಹೇಳಿದರು.

