ಎಸ್‌.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಗರ್ಭಾಶಯ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

0
6

ಮಂಗಳೂರು : ಎಸ್‌.ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಕ್ಷೇಮಪಾಲನಾ ಸಂಘದ ವತಿಯಿಂದ ಜುಲೈ 29ರಂದು ಮಧ್ಯಾಹ್ನ 2.30 ಗಂಟೆಗೆ ಕಾಲೇಜಿನ ಉಪನ್ಯಾಸ ಕೊಠಡಿ–03ರಲ್ಲಿ “ಗರ್ಭಾಶಯ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ” ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವು ಸಂಸ್ಥೆಯ ಗೀತೆಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕೇರ್ ಎನ್ ಸೇಫ್ ಆಫ್ ಇಂಡಿಯಾ (NGO), ಮಂಗಳೂರು ಸಂಸ್ಥೆಯ ಅಮಿತಾ ಕೆ. ನಾಯಕ್ ಅವರು ಗರ್ಭಾಶಯ ಕ್ಯಾನ್ಸರ್ ಕುರಿತು ಸಮಗ್ರ ಮಾಹಿತಿ ನೀಡಿದರು. ಗರ್ಭಾಶಯ ಕ್ಯಾನ್ಸರ್ ಉಂಟಾಗುವ ಕಾರಣಗಳು, ಆರೋಗ್ಯ ತಪಾಸಣೆಯ ಅಗತ್ಯತೆ ಹಾಗೂ ಆರೋಗ್ಯಕರ ಜೀವನಶೈಲಿಯ ಮೂಲಕ ರೋಗವನ್ನು ತಡೆಗಟ್ಟಬಹುದಾದ ಕ್ರಮಗಳನ್ನು ವಿವರಿಸುವ ಮೂಲಕ ಮಹತ್ವದ ಸಂದೇಶವನ್ನು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಬ್ಬಂದಿಯ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ಅವರಲ್ಲಿದ್ದ ಹಲವು ಸಂದೇಹಗಳನ್ನು ನಿವಾರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಹಾರ್ದಿಕ್ ಪಿ. ಚೌಹಾಣ್ ಅವರು ಸಂಪನ್ಮೂಲ ವ್ಯಕ್ತಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಕ್ಷೇಮ ಪಾಲನಾ ಸಂಘದ ಕಾರ್ಯದರ್ಶಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥೆ ಸುಚಿತ್ರ ಪಿ. ಶೆಟ್ಟಿ ಎಲ್ಲರನ್ನು ಹೃತ್ಪೂರ್ವಕ ವಾಗಿ ಸ್ವಾಗತಿಸಿ , ಮಹಿಳೆಯರ ಆರೋಗ್ಯದ ಕುರಿತು ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಜಾಗೃತಿಯೇ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದರು.

ಬಿಬಿಎ ವಿಭಾಗದ ಉಪನ್ಯಾಸಕಿ ಸಂಗೀತ ಶಾನುಭೋಗ ಅವರು ವಂದನಾರ್ಪಣೆಯನ್ನು ನೆರವೇರಿಸಿ ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ವಿಭಾಗದ ಉಪನ್ಯಾಸಕಿ ಸರಸ್ವತಿ ಚಿನ್ನಕಟ್ಟೆ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಸುಮಾರು 40 ಮಹಿಳಾ ಉಪನ್ಯಾಸಕಿಯರು ಹಾಗೂ ಸಿಬ್ಬಂದಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಆರೋಗ್ಯ ಜಾಗೃತಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಯನ್ನು ಪಡೆದುಕೊಂಡರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.