ಪೂಜ್ಯ ಏಲಾಚಾರ್ಯ ಪ್ರಸಂಗಸಾಗರ ಮುನಿಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಮಂಗಳವಾರ ಬೆಳ್ತಂಗಡಿ ಬಸದಿಯಲ್ಲಿ ಹನ್ನೆರಡನೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಲಘುಸಿದ್ಧಚಕ್ರ ಯಂತ್ರಾರಾಧನೆ ನಡೆಯಿತು.
ಉಜಿರೆ : ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನ ತೀರ್ಥಕ್ಷೇತ್ರದಲ್ಲಿ ಮಂಗಳವಾರ ಪೂಜ್ಯ ಏಲಾಚಾರ್ಯ ಪ್ರಸಂಗಸಾಗರ ಮುನಿಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ಬಸದಿಯ ೧೨ನೆ ವಾರ್ಷಿಕೋತ್ಸವ ಹಾಗೂ ಲಘುಸಿದ್ಧಚಕ್ರ ಯಂತ್ರಾರಾಧನೆ ನಡೆಯಿತು.
ಮಂಗಳವಾರ ಬೆಳಿಗ್ಯೆ ಏಳು ಗಂಟೆಯಿAದ ತೋರಣ ಮುಹೂರ್ತ, ವಿಮಾನಶುದ್ಧಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಭಗವಾನ್ ಮಹಾವೀರಸ್ವಾಮಿ ಮೂರ್ತಿಗೆ ಪಂಚಾಮೃತಾಭಿಷೇಕ, ಭಗವಾನ್ ಶಾಂತಿನಾಥಸ್ವಾಮಿಗೆ ೧೦೮ ಕಲಶಗಳಿಂದ ಅಭಿಷೇಕ, ಮೂರೂ ಬಸದಿಗಳಲ್ಲಿ ಪಂಚಾಮೃತಾಭಿಷೇಕ, ಮಹಾಮಾತೆ ಪದ್ಮಾವತಿ ದೇವಿಗೆ ಅಲಂಕಾರ ಪೂಜೆ ಹಾಗೂ ಬ್ರಹ್ಮಯಕ್ಷ ದೇವರಿಗೆ ವಿಶೇಷ ಪೂಜೆ ನಡೆಯಿತು.
ಬಸದಿಯ ಪ್ರಧಾನ ಅರ್ಚಕರಾದ ಜಯರಾಜ ಇಂದ್ರರ ನೇತೃತ್ವದಲ್ಲಿ ಸಹಪುರೋಹಿತರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಜಯಶ್ರೀ ಹೊರನಾಡು ಮತ್ತು ಬಳಗದವರ ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.
ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರ ಕೆ. ಜಯವರ್ಮರಾಜ ಬಳ್ಳಾಲ್ ಮತ್ತು ಕುಟುಂಬಸ್ಥರು, ಡಾ. ಕೆ. ಜೀವಂಧರ ಬಳ್ಳಾಲ್, ಕೆ. ರಾಜವರ್ಮ ಬಳ್ಳಾಲ್, ಡಾ. ಮಾಲತಿ ಹೆಗ್ಡೆ, ಡಾ. ಪ್ರಿಯಾ ಬಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

