ವಿಕಸಿತ ಭಾರತದ ಕನಸು: ಯುವಜನರ ಸಂಕಲ್ಪವಾಗಬೇಕು – ಕ್ಯಾಪ್ಟನ್ ಬ್ರಿಜೇಶ್ ಚೌಟ

0
4

ಪುತ್ತೂರು : ವಿಶ್ವದಲ್ಲಿಯೇ ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ರಾಷ್ಟ್ರವಾಗಿದ್ದು, ವಿಕಸಿತ ಭಾರತದ ಕನಸನ್ನು ನನಸು ಮಾಡಲು ಪ್ರತಿಯೊಬ್ಬ ಭಾರತೀಯನು ದೇಶದ ಎದುರಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ದಕ್ಷತೆ, ಜ್ಞಾನ ಹಾಗೂ ರಾಷ್ಟ್ರಪ್ರೇಮದ ಮನೋಭಾವದೊಂದಿಗೆ ರಾಷ್ಟ್ರ ಸೇವೆಗೆ ಸಜ್ಜಾಗುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ಅವರು ವಿವೇಕಾನಂದ ಪದವಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಭಾರತ ಇಂದು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ವಿಶ್ವದಲ್ಲಿ ಹೆಮ್ಮೆಯಿಂದ ನಿಂತಿರುವುದಕ್ಕೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ರಾಷ್ಟ್ರದ ಸಾಂಸ್ಕೃತಿಕ ಬುನಾದಿಯೇ ಕಾರಣವಾಗಿದೆ. ದೇಶದ ಗಡಿಯನ್ನು ಕಾಯುವ ಪ್ರತಿಯೊಬ್ಬ ಯೋಧನ ರಾಷ್ಟ್ರಪ್ರೇಮ, ತ್ಯಾಗ ಮತ್ತು ಬಲಿದಾನದಿಂದಲೇ ಇಂದು ದೇಶ ಸುರಕ್ಷಿತವಾಗಿದೆ. ಭಾರತವನ್ನು ವಿಶ್ವಗುರುವನ್ನಾಗಿ ರೂಪಿಸುವ ಕಾರ್ಯದಲ್ಲಿ ಪ್ರತಿಯೊಬ್ಬ ಯುವಜನರೂ ತಮ್ಮ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ವಿವಿಧ ರಾಷ್ಟ್ರೀಯ, ಸಾಮಾಜಿಕ ಹಾಗೂ ಯುವಜನರ ಪಾತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿ, ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ವಿವೇಕಾನಂದ ಪದವಿ ಮಹಾವಿದ್ಯಾಲಯದ ಅಧ್ಯಕ್ಷರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ, ನೆಮ್ಮದಿ ಮತ್ತು ಭದ್ರತೆಯ ಹಿಂದೆ ಭಾರತೀಯ ಸೈನಿಕರ ಅಪಾರ ತ್ಯಾಗ ಅಡಗಿದೆ. ದೇಶದ ರಕ್ಷಣೆಗೆ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರಯೋಧರನ್ನು ಪ್ರತಿಯೊಬ್ಬ ಭಾರತೀಯನು ಸದಾ ಗೌರವಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ವೀರಗಾಥೆಯನ್ನು ಹಾಡಿನ ಮೂಲಕ ಸ್ಮರಿಸಲಾಯಿತು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧರ ಭಾವಚಿತ್ರಕ್ಕೆ ಹಣತೆ ಬೆಳಗಿಸಿ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪನ್ಯಾಸಕರು, ಉಪನ್ಯಾಸಕೇತರ ಸಿಬ್ಬಂದಿ, ಎನ್‌ಸಿಸಿ ಕೆಡೆಟ್‌ಗಳು ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಯೋಧ ನಮನ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ರವೀಂದ್ರ ಪಿ. ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಉಪನ್ಯಾಸಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.