ಬ್ರಹ್ಮಾವರ: ಗ್ರಾಮೀಣಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ (ರುಡ್‌ಸೆಟ್), ಬ್ರಹ್ಮಾವರ ವತಿಯಿಂದ ಅಗರಬತ್ತಿ ತಯಾರಿಕಾ ತರಬೇತಿ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಮಿಲಿ ಅಜಯ್ ಶೆಟ್ಟಿ, ಹಿರಿಯ ಅಧ್ಯಾಪಕರು, ಬೋರ್ಡ್ ಹೈಸ್ಕೂಲ್, ಬ್ರಹ್ಮಾವರ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ತಮ್ಮ ಭಾಷಣದಲ್ಲಿ,”ಸಣ್ಣ ಮಟ್ಟದ ಉದ್ಯಮವೆಂದು ಯಾವುದೇ ಉದ್ಯಮವನ್ನು ಕೀಳಾಗಿ ಕಾಣಬಾರದು. ಮಿತ ಬಂಡವಾಳದಿಂದಲೂ ಉತ್ತಮ ಉದ್ಯಮವನ್ನು ಆರಂಭಿಸಿ ಯಶಸ್ಸು ಸಾಧಿಸಬಹುದು. ಆದ್ದರಿಂದ ಯಾವುದೇ ಕೌಶಲ್ಯದ ಬಗ್ಗೆ ಕೀಳರಿಮೆ ಹೊಂದಬಾರದು. ಮಿತ ಬಂಡವಾಳದಿಂದಲೂ ಯಶಸ್ವಿ ಉದ್ಯಮ ಆರಂಭಿಸಬಹುದು. ಇಂದಿನ ಸಮಾಜದಲ್ಲಿ ಕೇವಲ ಪದವಿಗಳಿಗಿಂತ ಕೌಶಲ್ಯಾಧಾರಿತ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಮಹಿಳಾ ಸಬಲೀಕರಣದತ್ತ ನೀವು ಮಹತ್ವದ ಹೆಜ್ಜೆ ಇಟ್ಟಿದ್ದು, ಈ ತರಬೇತಿಯನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು,” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಮಾತನಾಡಿ,”ಹೊಸತನದತ್ತ ನಿಮ್ಮ ಆಸಕ್ತಿ ಮತ್ತು ಕಲಿಕೆಯ ಮನೋಭಾವ ಅಭಿವೃದ್ಧಿಯ ಸಂಕೇತವಾಗಿದೆ. ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಸೂಕ್ತ ತರಬೇತಿ ಪಡೆದು ಉದ್ಯಮ ಆರಂಭಿಸಿದರೆ ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಬಹುದು,” ಎಂದು ತಿಳಿಸಿದರು. ಅವರು ತರಬೇತಿಯಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರವಿ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಚೈತ್ರ ಕೆ. ನಿರೂಪಿಸಿ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಸಂತೋಷ್ ಶೆಟ್ಟಿ ವಂದಿಸಿದರು.

