ಮೂಢನಂಬಿಕೆಯ ಕ್ರೌರ್ಯ: ಹಾವು ಕಚ್ಚಿದ ಬಾಲಕನನ್ನು ನದಿಯಲ್ಲಿ 12 ಗಂಟೆ ಮುಳುಗಿಸಿದ ತಾಂತ್ರಿಕ..!

0
126

ಪಟ್ನಾ : ಆಧುನಿಕ ಯುಗದಲ್ಲೂ ಬೆನ್ನುಬಿಡದ ಮೂಢನಂಬಿಕೆಗೆ 14 ವರ್ಷದ ಬಾಲಕನೊಬ್ಬ ದಾರುಣವಾಗಿ ಬಲಿಯಾಗಿರುವ ಘಟನೆ ಬಿಹಾರದಲ್ಲಿ ಸಂಭವಿಸಿದೆ. ವಿಷಪೂರಿತ ಹಾವಿನ ಕಡಿತಕ್ಕೊಳಗಾದ ಬಾಲಕನನ್ನು ಆಸ್ಪತ್ರೆಗೆ ಸೇರಿಸುವ ಬದಲು, ತಾಂತ್ರಿಕನ ಮಾತನ್ನು ನಂಬಿ ಸತತ 12 ಗಂಟೆಗಳ ಕಾಲ ಗಂಗಾನದಿಯ ನೀರಿನಲ್ಲಿ ಮುಳುಗಿಸಿಟ್ಟ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ.

​ವರದಿಗಳ ಪ್ರಕಾರ, ಬಾಲಕನು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿತ್ತು. ತಕ್ಷಣವೇ ಆತನನ್ನು ಚಿಕಿತ್ಸೆಗೆ ಕರೆದೊಯ್ಯುವ ಬದಲು, ಕುಟುಂಬಸ್ಥರು ಸ್ಥಳೀಯ ತಾಂತ್ರಿಕನ ಮೊರೆ ಹೋಗಿದ್ದಾರೆ. “ಬಾಲಕನನ್ನು ಗಂಗಾನದಿಯ ನೀರಿನಲ್ಲಿ ಇಡೀ ರಾತ್ರಿ ಮುಳುಗಿಸಿಟ್ಟರೆ ವಿಷವೆಲ್ಲ ಇಳಿದು ಆತ ಬದುಕುತ್ತಾನೆ” ಎಂದು ತಾಂತ್ರಿಕನು ಕುಟುಂಬದವರನ್ನು ನಂಬಿಸಿದ್ದಾನೆ.

ತಾಂತ್ರಿಕನ ಸೂಚನೆಯಂತೆ ಬಾಲಕನನ್ನು ಬಾಳೆಕಂಬಗಳಿಗೆ ಕಟ್ಟಿ, ಸುಮಾರು 12 ಗಂಟೆಗಳ ಕಾಲ ನದಿಯ ನೀರಿನಲ್ಲಿ ಇರಿಸಲಾಗಿತ್ತು.ಇಡೀ ರಾತ್ರಿ ನೀರಿನಲ್ಲೇ ಇದ್ದ ಬಾಲಕನ ಸ್ಥಿತಿ ಅತೀ ಗಂಭೀರ ತಲುಪಿತ್ತು. ಮರುದಿನ ಬೆಳಿಗ್ಗೆ ಬಾಲಕನಲ್ಲಿ ಯಾವುದೇ ಚಲನೆ ಇಲ್ಲದಿದ್ದಾಗ ಕುಟುಂಬಸ್ಥರು ಗಾಬರಿಗೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ.

ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಹಾವಿನ ವಿಷ ದೇಹಕ್ಕೆ ಹರಡಿರುವುದರ ಜೊತೆಗೆ, ದೀರ್ಘಕಾಲ ನೀರಿನಲ್ಲಿದ್ದ ಕಾರಣ ಉಸಿರಾಟದ ತೊಂದರೆಯೂ ಸಾವು ಸಂಭವಿಸಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

LEAVE A REPLY

Please enter your comment!
Please enter your name here